ಮುಸ್ಲಿಮರಿಗೆ ಮಾತ್ರ ಹೆಚ್ಚು ಮಕ್ಕಳಿದ್ದಾರೆಯೇ? ನನಗೂ ಐದು ಮಕ್ಕಳಿದ್ದಾರೆ: ಪ್ರಧಾನಿ ಮೋದಿಗೆ ಖರ್ಗೆ ತಿರುಗೇಟು
ನರೇಂದ್ರ ಮೋದಿ , ಮಲ್ಲಿಕಾರ್ಜುನ ಖರ್ಗೆ | PC : PTI
ಹೊಸದಿಲ್ಲಿ: ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟ ಲೋಕಸಭಾ ಚುನಾವಣೆಯಲ್ಲಿ ಬಹುಮತ ಗಳಿಸುವತ್ತ ಮುನ್ನಡೆಯುತ್ತಿರುವುದನ್ನು ಕಂಡು ಪ್ರಧಾನಿ ನರೇಂದ್ರ ಮೋದಿ ಹತಾಶರಾಗಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಂಗಳವಾರ ಹೇಳಿದ್ದಾರೆ.
ಛತ್ತೀಸ್ಗಢದ ಜಂಜಗೀರ್-ಚಂಪಾ ಜಿಲ್ಲೆಯಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, ಆ ಕಾರಣದಿಂದ ಮೋದಿ ಇದೀಗ ಮಂಗಳಸೂತ್ರ ಮತ್ತು ಮುಸ್ಲಿಮರ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು.
"ನಾವು ಬಹುಮತ ಗಳಿಸುವ ನಿಟ್ಟಿನಲ್ಲಿ ಮುನ್ನಡೆದಿದ್ದೇವೆ. ಈ ಕಾರಣದಿಂದ ಮೋದಿ ಈಗ ಮಂಗಳಸೂತ್ರ ಮತ್ತು ಮುಸ್ಲಿಮರ ಬಗ್ಗೆ ಮಾತನಾಡುತ್ತಿದ್ದಾರೆ. ನಿಮ್ಮ ಸಂಪತ್ತನ್ನು ನಾವು ಸುಲಿಗೆ ಮಾಡುತ್ತೇವೆ ಹಾಗೂ ಹೆಚ್ಚು ಮಕ್ಕಳಿದ್ದವರಿಗೆ ಹಂಚುತ್ತೇವೆ ಎಂದು ಅವರು ಹೇಳುತ್ತಿದ್ದಾರೆ. ಬಡವರಿಗೆ ಯಾವಾಗಲೂ ಹೆಚ್ಚು ಮಕ್ಕಳು, ಮುಸ್ಲಿಮರಿಗೆ ಮಾತ್ರ ಹೆಚ್ಚು ಮಕ್ಕಳಿರುತ್ತಾರೆಯೇ" ಎಂದು ಪ್ರಶ್ನಿಸಿದರು.
"ಬಡಕುಟುಂಬಗಳಲ್ಲಿ ಮಕ್ಕಳು ಹೆಚ್ಚು. ಏಕೆಂದರೆ ಅವರಲ್ಲಿ ಸಂಪತ್ತು ಇಲ್ಲ. ಆದರೆ ನೀವು ಮುಸ್ಲಿಮರ ಬಗ್ಗೆ ಮಾತ್ರ ಏಕೆ ಮಾತನಾಡುತ್ತೀರಿ? ಮುಸ್ಲಿಮರು ಕೂಡಾ ಈ ದೇಶಕ್ಕೆ ಸೇರಿದವರು" ಎಂದು ಖರ್ಗೆ ನುಡಿದರು. "ನಮ್ಮ ತಂದೆ ತಾಯಿಗೆ ನಾನೊಬ್ಬನೇ ಮಗನಾದರೂ, ನನಗೆ ಐದು ಮಂದಿ ಮಕ್ಕಳಿದ್ದಾರೆ. ನನ್ನ ತಾಯಿ, ಸಹೋದರಿ, ಚಿಕ್ಕಪ್ಪ ಮನೆಗೆ ಬೆಂಕಿ ಹಚ್ಚಿದಾಗ ಜೀವ ಕಳೆದುಕೊಂಡರು" ಎಂದು ನೆನಪಿಸಿಕೊಂಡರು. ನನ್ನ ತಂದೆಗೆ ನಾನೊಬ್ಬನೇ ಮಗ. ಆದ್ದರಿಂದ ನಮ್ಮ ಮನೆಯಲ್ಲಿ ಮಕ್ಕಳನ್ನು ನೋಡುವುದು ಅವರ ಬಯಕೆಯಾಗಿತ್ತು ಎಂದು ಬಣ್ಣಿಸಿದರು.