ʼವಾಟ್ಸಾಪ್ ವಿವಿ ಸಂದೇಶಗಳಿಗೆ ಮರುಳಾಗಬೇಡಿʼ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಕೆವಿ ವಿಶ್ವನಾಥನ್
ಕೆವಿ ವಿಶ್ವನಾಥನ್ | PC : X
ಹೊಸದಿಲ್ಲಿ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಕೆವಿ ವಿಶ್ವನಾಥನ್ ಅವರು ಶನಿವಾರ ವಾಟ್ಸಾಪ್ನಂತಹ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳಲ್ಲಿ ತಪ್ಪು ಮಾಹಿತಿಗಳು ಹೆಚ್ಚಾಗಿ ಪ್ರಚಾರವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದು, ಇಂತಹ ವೇದಿಕೆಗಳಲ್ಲಿನ ಸಂದೇಶಗಳಿಗೆ ಹೆಚ್ಚು ಮರುಳಾಗಬೇಡಿ ಎಂದು ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಬಹಳಷ್ಟು ತಪ್ಪು ಕಲ್ಪನೆಗಳಿವೆ. ನಾವು ವಾಟ್ಸಾಪ್ ವಿಶ್ವವಿದ್ಯಾಲಯವನ್ನು ಹೊಂದಿದ್ದೇವೆ. ಇಂತಹ ವೇದಿಕೆಗಳಲ್ಲಿ ಬರುವ ಸಂದೇಶಗಳಿಗೆ ನಾವು ಮರುಳಾಗಬಾರದು. ಇಂತಹ ವೇದಿಕೆಗಳಲ್ಲಿ ಬಹಳಷ್ಟು ಸತ್ಯದ ಕಗ್ಗೊಲೆ ನಡೆಯುತ್ತಿದೆ ಎಂದು ನ್ಯಾಯಮೂರ್ತಿ ವಿಶ್ವನಾಥನ್ ಹೇಳಿದ್ದಾರೆ.
ಒಪಿ ಜಿಂದಾಲ್ ಗ್ಲೋಬಲ್ ಲಾ ಯೂನಿವರ್ಸಿಟಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನ್ಯಾಯಮೂರ್ತಿ ವಿಶ್ವನಾಥನ್, ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸುವ ಅಗತ್ಯವನ್ನು ಒತ್ತಿ ಹೇಳಿದ್ದಾರೆ. ಅಲ್ಪಸಂಖ್ಯಾತ ಪದವು ಕೇವಲ ಧಾರ್ಮಿಕ ಗುಂಪುಗಳನ್ನು ಮಾತ್ರವಲ್ಲದೆ ಭಾಷಾ ಅಲ್ಪಸಂಖ್ಯಾತರನ್ನು ಕೂಡ ಪ್ರತಿನಿಧಿಸುತ್ತದೆ ಎಂದು ಹೇಳಿದ್ದಾರೆ.
ನ್ಯಾಯಾಂಗವು ತ್ವರಿತವಾಗಿ ನ್ಯಾಯವನ್ನು ನೀಡುವ ಜವಾಬ್ಧಾರಿ ಹೊಂದಿದೆ ಮತ್ತು ನ್ಯಾಯ ನೀಡುವುದರಲ್ಲಿನ ವಿಳಂಬವು ಕಾನೂನಿನ ಉಲ್ಲಂಘನೆಯಾಗಿದೆ. ತಮ್ಮ ಅಧಿಕಾರಾವಧಿ ಮುಗಿದ ನಂತರ ಒಬ್ಬನೇ ಒಬ್ಬ ಸುಪ್ರೀಂ ಕೋರ್ಟ್ ನ್ಯಾಯಾಧೀಶ, ಶಾಸಕ ಅಥವಾ ಕಾರ್ಯಾಂಗದ ಪ್ರತಿನಿಧಿ ತಮ್ಮ ಸ್ಥಾನಗಳಿಗೆ ಅಂಟಿಕೊಂಡಿರಲು ಸಾಧ್ಯವಿಲ್ಲ ಎಂಬ ಅಂಶವನ್ನು ನ್ಯಾಯಮೂರ್ತಿ ವಿಶ್ವನಾಥನ್ ಇದೇ ವೇಳೆ ಒತ್ತಿ ಹೇಳಿದ್ದಾರೆ.