ರೈಲ್ವೇ ಪ್ರಯಾಣಿಕರಿಗೆ ನೀಡುವ ಹೊದಿಕೆಗಳನ್ನು ತಿಂಗಳಿಗೊಮ್ಮೆ ತೊಳೆಯಲಾಗುತ್ತದೆ: ರೈಲ್ವೆ ಸಚಿವ ಅಶ್ವಿನಿ ವೈಷ್ಣವ್
ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Photo: PTI)
ಹೊಸದಿಲ್ಲಿ: ರೈಲ್ವೇ ಪ್ರಯಾಣಿಕರಿಗೆ ನೀಡುವ ಹೊದಿಕೆಗಳನ್ನು ತಿಂಗಳಿಗೊಮ್ಮೆ ತೊಳೆಯಲಾಗುತ್ತದೆ ಮತ್ತು ಹಾಸಿಗೆಯ ಹೊದಿಕೆಗಾಗಿ ಹೆಚ್ಚುವರಿ ಬೆಡ್ ಶೀಟನ್ನು ಬೆಡ್ರೋಲ್ ಕಿಟ್ ನಲ್ಲಿ ನೀಡಲಾಗುತ್ತದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಲೋಕಸಭೆಗೆ ತಿಳಿಸಿದ್ದಾರೆ.
ಮೂಲ ನೈರ್ಮಲ್ಯ ಮಾನದಂಡಗಳನ್ನು ಪೂರೈಸುವ ಹಾಸಿಗೆಗಾಗಿ ಪ್ರಯಾಣಿಕರು ಪಾವತಿಸುವಾಗ ಉಣ್ಣೆಯ ಹೊದಿಕೆಗಳನ್ನು ತಿಂಗಳಿಗೊಮ್ಮೆ ಮಾತ್ರ ತೊಳೆಯಲಾಗುತ್ತದೆಯೇ ಎಂಬ ಕಾಂಗ್ರೆಸ್ ಸಂಸದ ಕುಲದೀಪ್ ಇಂದೋರಾ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಅಶ್ವಿನಿ ವೈಷ್ಣವ್, ಪ್ರಸ್ತುತ ಭಾರತೀಯ ರೈಲ್ವೆಯಲ್ಲಿ ಬಳಸಲಾಗುವ ಕಂಬಳಿಗಳು ಹಗುರವಾಗಿರುತ್ತವೆ, ತೊಳೆಯಲು ಸುಲಭ ಮತ್ತು ಒಟ್ಟಾರೆ ಆರಾಮದಾಯಕ ಪ್ರಯಾಣದ ಅನುಭವ ಒದಗಿಸುತ್ತದೆ. ಯಾಂತ್ರೀಕೃತ ಲಾಂಡ್ರಿ ವ್ಯವಸ್ಥೆ ಇರುತ್ತದೆ, ಗುಣಮಟ್ಟದ ಯಂತ್ರಗಳ ಬಳಕೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ರೈಲ್ವೇಯಲ್ಲಿ ಪ್ರಯಾಣಿಕರು ರೈಲ್ ಮದದ್ ಆ್ಯಪ್ ಮೂಲಕ ತಮ್ಮ ದೂರುಗಳನ್ನು ದಾಖಲಿಸಬಹುದು. ಪ್ರಯಾಣಿಕರಿಂದ ದೂರು ಬಂದ ತಕ್ಷಣ ಕ್ರಮ ಕೈಗೊಳ್ಳಲಾಗುವುದು. ತಕ್ಷಣ ಕ್ರಮ ಕೈಗೊಳ್ಳಲು ವಲಯ ಪ್ರಧಾನ ಕಚೇರಿ ಮತ್ತು ವಿಭಾಗೀಯ ಮಟ್ಟದಲ್ಲಿ ವಾರ್ ರೂಮ್ಗಳನ್ನು ಸ್ಥಾಪಿಸಲಾಗಿದೆ. ಹೊದಿಕೆಗಳು ಅಥವಾ ಬೆಡ್ರೋಲ್ಗಳು ಇರಲಿ, ಎಲ್ಲವನ್ನೂ ಸ್ವಚ್ಛಗೊಳಿಸಲಾಗುತ್ತದೆ. ತೊಳೆದ ಲಿನಿನ್ ವಸ್ತುಗಳ ಗುಣಮಟ್ಟವನ್ನು ಪರೀಕ್ಷಿಸಲು ವೈಟೊ-ಮೀಟರ್ ಗಳನ್ನು ಬಳಸಲಾಗುತ್ತದೆ ಎಂದು ಹೇಳಿದ್ದಾರೆ.