ಸಾಂತಾ ಕ್ಲಾಸ್ ವೇಷದಲ್ಲಿ ಪುಡ್ ಡೆಲಿವರಿ ಮಾಡುತ್ತಿದ್ದ ಏಜೆಂಟನ್ನು ತಡೆದು ವೇಷಭೂಷಣವನ್ನು ಬಲವಂತವಾಗಿ ತೆಗೆಸಿದ ಹಿಂದುತ್ವವಾದಿಗಳ ಗುಂಪು
Photo | NDTV
ಇಂದೋರ್: ಕ್ರಿಸ್ಮಸ್ ಹಬ್ಬದಂದು ಸಾಂತಾ ಕ್ಲಾಸ್ ವೇಷದಲ್ಲಿ ಪುಡ್ ಡೆಲಿವರಿ ಮಾಡುತ್ತಿದ್ದ ಝೊಮಾಟೊ ಏಜೆಂಟನ್ನು ತಡೆದು ಹಿಂದುತ್ವವಾದಿಗಳ ಗುಂಪೊಂದು ಆತ ಧರಿಸಿದ್ದ ಸಾಂಟಾ ಕ್ಲಾಸ್ ವೇಷವನ್ನು ಬಲವಂತವಾಗಿ ತೆಗೆಸಿದ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿದೆ.
ಸಾಮಾಜಿಕ ಮಾಧ್ಯಮದಲ್ಲಿ ಈ ಕುರಿತು ವೀಡಿಯೊ ವೈರಲ್ ಆಗಿದ್ದು, ವೀಡಿಯೊದಲ್ಲಿ 'ಹಿಂದೂ ಜಾಗರಣ ಮಂಚ್' ಸದಸ್ಯರು ಝೊಮಾಟೊ ಪುಡ್ ಡೆಲಿವರಿ ಏಜೆಂಟ್ ಬಳಿ ಸಾಂಟಾ ಕ್ಲಾಸ್ ವೇಷವನ್ನು ತೆಗೆಯುವಂತೆ ಸೂಚಿಸುವುದು ಕಂಡು ಬಂದಿದೆ.
ಝೊಮಾಟೊ ಪುಡ್ ಡೆಲಿವರಿ ಏಜೆಂಟ್ ನ್ನು ತಡೆದ 'ಹಿಂದೂ ಜಾಗರಣ ಮಂಚ್' ಸದಸ್ಯರು "ನೀವು ಸಾಂತಾ ಕ್ಲಾಸ್ ನಂತೆ ಬಟ್ಟೆ ಧರಿಸಿ ಆರ್ಡರ್ ಅನ್ನು ತಲುಪಿಸುತ್ತಿದ್ದೀರಾ?" ಎಂದು ಪ್ರಶ್ನಿಸಿದೆ. ಈ ವೇಳೆ ಏಜೆಂಟ್ ಹೌದು ಎಂದು ಹೇಳಿದ್ದಾರೆ. "ನೀವು ಎಂದಾದರೂ ದೀಪಾವಳಿಯಂದು ಭಗವಾನ್ ರಾಮನ ವೇಷ ಧರಿಸಿ ಜನರ ಮನೆಗಳಿಗೆ ಹೋಗಿದ್ದೀರ ಎಂದು ಗುಂಪು ಮತ್ತೆ ಪ್ರಶ್ನಿಸಿದೆ, ಇದಕ್ಕೆ ಏಜೆಂಟ್ ಇಲ್ಲ ಎಂದು ಹೇಳಿದ್ದು, ಈಗ ನನಗೆ ಕಂಪೆನಿ ಈ ವೇಷ ಭೂಷಣ ಧರಿಸಲು ಹೇಳಿದೆ ಎಂದು ಹೇಳಿದ್ದಾರೆ. ಝೊಮಾಟೊ, ಹಬ್ಬದ ಹಿನ್ನೆಲೆ ಡ್ರೆಸ್ ಕೋಡ್ ಅನ್ನು ಕಡ್ಡಾಯಗೊಳಿಸಿದೆ, ಡೆಲಿವರಿ ಏಜೆಂಟ್ ಈ ಬಟ್ಟೆ ಧರಿಸಿ ಸೆಲ್ಫಿಯನ್ನು ಕಳುಹಿಸಬೇಕಿದೆ. ನಾವು ಆದೇಶವನ್ನು ಪಾಲಿಸದಿದ್ದರೆ ವೇತನ ಕಡಿತ, ಐಡಿ ಬ್ಲಾಕ್ ನಂತಹ ಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂದು ಏಜೆಂಟ್ ಹೇಳಿದ್ದಾರೆ. ಈ ವೇಳೆ ಸೆಲ್ಫಿಗಾಗಿ ಮಾತ್ರ ವೇಷಭೂಷಣವನ್ನು ಧರಿಸುವಂತೆ ಗುಂಪು ಡೆಲಿವರಿ ಏಜೆಂಟ್ ಗೆ ಹೇಳಿದೆ.
ನಂತರ ವೇಷಭೂಷಣವನ್ನು ಪುಡ್ ಡೆಲಿವರಿ ಏಜೆಂಟ್ ತೆಗೆದಿದ್ದಾರೆ. ಈ ವೇಳೆ "ಜೈ ಶ್ರೀ ರಾಮ್" ಎಂದು ಘೋಷಣೆ ಕೂಗಿದ ನಂತರ ಅವರನ್ನು ಮುಂದಕ್ಕೆ ಹೋಗಲು ಅನುಮತಿ ನೀಡಲಾಗಿದೆ.