ವಿಮಾನ ಪ್ರಯಾಣಿಕನಿಗೆ ಹೃದಾಯಾಘಾತ: ವಾಯುಯಾನದ ನಡುವೆಯೇ ಪ್ರಾಣ ಉಳಿಸಿದ ವೈದ್ಯ & ಸಿಬ್ಬಂದಿ ವರ್ಗ
ಏರ್ ಇಂಡಿಯಾ ಎಕ್ಸ್ ಪ್ರೆಸ್ | ಸಾಂದರ್ಭಿಕ ಚಿತ್ರ
ಪುಣೆ: ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದಲ್ಲಿ ಪ್ರಯಾಣಿಸುವಾಗ ಹೃದಯ ಸ್ತಂಭನಕ್ಕೆ ಒಳಗಾಗಿದ್ದ ಮಧ್ಯವಯಸ್ಸಿನ ಮಹಿಳಾ ಪ್ರಯಾಣಿಕರೊಬ್ಬರ ಜೀವವನ್ನು ದಿಲ್ಲಿಯಿಂದ ಪುಣೆಗೆ ಪ್ರಯಾಣಿಸುತ್ತಿದ್ದ ಓರ್ವ ವೈದ್ಯ, ವಿಮಾನ ಸಿಬ್ಬಂದಿಗಳು ಹಾಗೂ ಸಹ ಪ್ರಯಾಣಿಕರು ಒಟ್ಟುಗೂಡಿ ಉಳಿಸಿರುವ ಘಟನೆ ತಡವಾಗಿ ವರದಿಯಾಗಿದೆ.
ದಿಲ್ಲಿಯಿಂದ ಬೆಳಗ್ಗೆ ಸುಮಾರು 4 ಗಂಟೆಯ ವೇಳೆಗೆ ನಿರ್ಗಮಿಸಿದ್ದ ವಿಮಾನ ಸಂಖ್ಯೆ I5-764, ಬೆಳಗ್ಗೆ 6.10ಕ್ಕೆ ಪುಣೆಯಲ್ಲಿ ಭೂಸ್ಪರ್ಶ ಮಾಡಬೇಕಿತ್ತು. ಈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಪೈಕಿ ಭುವನೇಶ್ವರದ ಕಳಿಂಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಹಿರಿಯ ಸಮಾಲೋಚಕ(ಹೃದಯ ಅರವಳಿಕೆ)ರಾಗಿ ಕಾರ್ಯನಿರ್ವಹಿಸುತ್ತಿರುವ ಡಾ. ಅಶೋಕ್ ಕುಮಾರ್ ಬಡಾಮಲಿ ಕೂಡಾ ಇದ್ದರು.
ಸುಮಾರು ಬೆಳಗ್ಗೆ 5.15ರ ವೇಳೆ ವಿಮಾನವು ವಾಯು ಮಾರ್ಗದಲ್ಲಿದ್ದಾಗ, “ವೈದ್ಯಕೀಯ ತುರ್ತಿದ್ದು, ವಿಮಾನದಲ್ಲಿ ಯಾರಾದರೂ ವೈದ್ಯರು ಅಥವಾ ಅರೆ ವೈದ್ಯಕೀಯ ಸಿಬ್ಬಂದಿಗಳು ಪ್ರಯಾಣಿಸುತ್ತಿದ್ದೀರಾ?” ಎಂದು ವಿಮಾನ ಸಿಬ್ಬಂದಿಗಳು ಪ್ರಶ್ನಿಸಿದ್ದಾರೆ. ಆ ಪ್ರಕಟಣೆಗೆ ತಕ್ಷಣ ಪ್ರತಿಕ್ರಿಯಿಸಿರುವ ಡಾ. ಬಡಾಮಲಿ ಅವರನ್ನು ಹೃದಯ ಸ್ತಂಭನಕ್ಕೆ ತುತ್ತಾಗಿದ್ದ ಮಹಿಳೆಯ ಆಸನದ ಬಳಿಗೆ ವಿಮಾನ ಸಿಬ್ಬಂದಿಗಳು ಕರೆದೊಯ್ದಿದ್ದಾರೆ. ಆಕೆ ಉಸಿರಾಡಲು ತೊಂದರೆ ಪಡುತ್ತಿರುವುದು ಡಾ. ಬಡಾಮಲಿ ಅವರ ಗಮನಕ್ಕೆ ಬಂದಿದೆ. ಆಕೆ ತಮ್ಮ ಸೀಟ್ ಬೆಲ್ಟ್ ಧರಿಸಿದ್ದರೂ, ಸ್ಪಂದನಾರಹಿತರಾಗಿರುವುದನ್ನು ಅವರು ಗಮನಿಸಿದ್ದಾರೆ.
ಅಂಥ ಸಂದರ್ಭದಲ್ಲಿ ಸಿಪಿಆರ್ (ಕಾರ್ಡಿಯೊ ಪಲ್ಮನರಿ ರಿಸರಕ್ಷನ್) ನೀಡುವುದು ಅಸಾಧ್ಯವಾಗಿರುವುದನ್ನು ಗಮನಿಸಿದ ವೈದ್ಯರು ಸಹ ಪ್ರಯಾಣಿಕರ ನೆರವು ಕೋರಿದ್ದಾರೆ. ಆಗ ವಿಮಾನ ಸಿಬ್ಬಂದಿಗಳು ಹಾಗೂ ಸಹ ಪ್ರಯಾಣಿಕರು ಕೂಡಲೇ ನೆರವಿಗೆ ಧಾವಿಸಿ, ಆ ಮಹಿಳೆಯನ್ನು ವಿಶಾಲವಾದ ಸ್ಥಳಾವಕಾಶವಿರುವ ರೆಕ್ಕೆಗಳ ಪ್ರದೇಶಕ್ಕೆ ಸ್ಥಳಾಂತರಿಸಿದ್ದಾರೆ. ನಂತರ ವೈದ್ಯರು ಆಕೆಗೆ ಪ್ರಥಮ ಚಿಕಿತ್ಸೆ ನೀಡಿ ನಾಡಿಮಿಡಿತ ಮರಳಿ ಬರುವಂತೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಆ ಮಹಿಳೆಯು ಅರೆ ಪ್ರಜ್ಞಾವಸ್ಥೆಗೆ ಮರಳಿದ್ದಾರೆ.
ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೈದ್ಯ ಡಾ. ಅಶೋಕ್ ಕುಮಾರ್ ಬಡಾಮಲಿ, ವಿಮಾನ ಸಿಬ್ಬಂದಿಗಳು ಹಾಗೂ ಸಹ ಪ್ರಯಾಣಿಕರು ತೋರಿದ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತವೊಂದು ತಪ್ಪಿದೆ. ಡಾ. ಅಶೋಕ್ ಕುಮಾರ್ ಬಡಾಮಲಿ ನೀಡಿದ ನೆರವಿಗೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಕ್ತಾರರು ಕೃತಜ್ಞತೆ ಸಲ್ಲಿಸಿದ್ದಾರೆ.