ಕೋಲ್ಕತ್ತಾ ವೈದ್ಯೆಯ ಅತ್ಯಾಚಾರ, ಕೊಲೆ ಪ್ರಕರಣ: ದೇಶಾದ್ಯಂತ ಹೊರ ರೋಗಿ ಸೇವೆಯನ್ನು ಸ್ಥಗಿತಗೊಳಿಸಿ ಮುಷ್ಕರ ನಡೆಸುತ್ತಿರುವ ವೈದ್ಯರು
Photo: PTI
ಹೊಸ ದಿಲ್ಲಿ: ಶನಿವಾರ ಬೆಳಗ್ಗೆ 6 ಗಂಟೆಯಿಂದ ರವಿವಾರ ಬೆಳಗ್ಗೆಯವರೆಗೆ ವೈದ್ಯಕೀಯ ಸೇವೆಯನ್ನು ಸ್ಥಗಿತಗೊಳಿಸಲು ಭಾರತೀಯ ವೈದ್ಯಕೀಯ ಒಕ್ಕೂಟ ನೀಡಿರುವ ಕರೆಗೆ ವೈದ್ಯರಿಂದ ವ್ಯಾಪಕ ಸ್ಪಂದನೆ ವ್ಯಕ್ತವಾಗಿದ್ದು, ದೇಶಾದ್ಯಂತ ವೈದ್ಯಕೀಯ ಸೇವೆಗಳು ವ್ಯತ್ಯಯಗೊಂಡಿವೆ.
ಕೋಲ್ಕತ್ತಾ ಆಸ್ಪತ್ರೆಯಲ್ಲಿ ತರಬೇತಿನಿರತ ವೈದ್ಯೆಯ ಮೇಲೆ ನಡೆದಿರುವ ಅಮಾನುಷ ಅತ್ಯಾಚಾರ ಹಾಗೂ ಹತ್ಯೆಯನ್ನು ಪ್ರತಿಭಟಿಸಿ, ಭಾರತೀಯ ವೈದ್ಯಕೀಯ ಒಕ್ಕೂಟವು ದೇಶಾದ್ಯಂತ ಮುಷ್ಕರಕ್ಕೆ ಕರೆ ನೀಡಿದ್ದು, ತುರ್ತಲ್ಲದ ವೈದ್ಯಕೀಯ ಸೇವೆಗಳನ್ನು 24 ಗಂಟೆ ಸ್ಥಗಿತಗೊಳಿಸುವಂತೆ ಕರೆ ನೀಡಿದೆ. ಈ ಹಿನ್ನೆಲೆಯಲ್ಲಿ ವೈದ್ಯರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.
ಜಾರ್ಖಂಡ್ ರಾಜ್ಯದಲ್ಲಿ ಎಲ್ಲ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಯ ವೈದ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಭಾರತೀಯ ವೈದ್ಯಕೀಯ ಒಕ್ಕೂಟವು ಹೇಳಿದೆ. ಮಧ್ಯಾಹ್ನದ ವೇಳೆಗೆ ರಾಂಚಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲು ಹಲವಾರು ವೈದ್ಯಕೀಯ ಸಂಘಟನೆಗಳು ಉದ್ದೇಶಿಸಿವೆ.
ದಿಲ್ಲಿಯ ಗುರು ತೇಜ್ ಬಹದ್ದೂರ್ ಆಸ್ಪತ್ರೆಯ ಹೊರ ರೋಗಿಗಳ ವಿಭಾಗ ಹಾಗೂ ಪ್ರಯೋಗಾಲಯ ವಿಭಾಗಗಳನ್ನು ಸ್ಥಗಿತಗೊಳಿಸುವ ಮೂಲಕ, ಆ ಆಸ್ಪತ್ರೆಯ ವೈದ್ಯರು ತಾವು ನಡೆಸುತ್ತಿರುವ ಮುಷ್ಕರವನ್ನು ಇಂದೂ ಕೂಡಾ ಮುಂದುವರಿಸಿದ್ದಾರೆ. ಚೆನ್ನೈ ವೈದ್ಯರು ಈ ದಿನ ತಮ್ಮ ಸೇವೆಯನ್ನು ಬಹಿಷ್ಕರಿಸಿದ್ದರೆ, ಪಶ್ಚಿಮ ಬಂಗಾಳದಲ್ಲಿ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳೆರಡರಲ್ಲೂ ಮುಷ್ಕರದಿಂದಾಗಿ ಹೊರ ರೋಗಿ ಸೇವೆಗಳು ಅಸ್ತವ್ಯಸ್ತಗೊಂಡಿವೆ.
ಭಾರತೀಯ ವೈದ್ಯಕೀಯ ಒಕ್ಕೂಟದ ಚಂಡೀಗಢ ಘಟಕವು ತನ್ನ ಹೊರ ರೋಗಿ ವಿಭಾಗದ ಸೇವೆಗಳನ್ನು ಅಮಾನತುಗೊಳಿಸಿದ್ದು, ಇಂದು ಬೆಳಗ್ಗೆ 11 ಗಂಟೆಯಿಂದ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದೆ. ಬೆಂಗಳೂರಿನಲ್ಲಿನ ಭಾರತೀಯ ವೈದ್ಯಕೀಯ ಒಕ್ಕೂಟದ ಕಚೇರಿಯಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ಸುಮಾರು 1,000 ವೈದ್ಯರು ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಭಾರತದಲ್ಲಿನ ಅತಿ ದೊಡ್ಡ ವೈದ್ಯಕೀಯ ಸಂಘಟನೆಯಾದ ಭಾರತೀಯ ವೈದ್ಯಕೀಯ ಒಕ್ಕೂಟವು, ವಾರಕ್ಕೆ 36 ಗಂಟೆಗಳ ಪಾಳಿಯೊಂದಿಗೆ ಅವರು ವಿರಮಿಸಲು ಸುರಕ್ಷಿತ ಸ್ಥಳಗಳನ್ನು ಒದಗಿಸಬೇಕು ಎಂಬ ಬೇಡಿಕೆಯೊಂದಿಗೆ ಸ್ಥಾನಿಕ ವೈದ್ಯಾಧಿಕಾರಿಗಳ ಸೇವಾವಧಿ ಹಾಗೂ ಕಾರ್ಯ ನಿರ್ವಹಣಾ ಸ್ಥಳಗಳನ್ನು ಸುಧಾರಿಸಬೇಕು ಎಂಬ ಬೇಡಿಕೆಯನ್ನು ಇಟ್ಟಿದೆ. ಕರ್ತವ್ಯ ನಿರ್ವಹಣಾ ಸ್ಥಳಗಳಲ್ಲಿ ವೈದ್ಯಕೀಯ ವೃತ್ತಿಪರರ ವಿರುದ್ಧ ನಡೆಯುವ ಹಿಂಸಾತ್ಮಕ ದಾಳಿಗಳನ್ನು ತಡೆಯಲು ಕೇಂದ್ರೀಯ ಕಾನೂನೊಂದನ್ನು ಪರಿಚಯಿಸಬೇಕು ಎಂದೂ ಬೇಡಿಕೆ ಇಟ್ಟಿದೆ.
ಇಂದು (ಶನಿವಾರ) ಬೆಳಗ್ಗೆ 6 ಗಂಟೆಗೆ ಪ್ರಾರಂಭಗೊಂಡಿರುವ ಮುಷ್ಕರವು ರವಿವಾರದವರೆಗೆ ಮುಂದುವರಿಯಲಿದ್ದು, ಎಲ್ಲ ತುರ್ತು ಸೇವೆಗಳು ಚಾಲನೆಯಲ್ಲಿರಲಿವೆ. ಆದರೆ, ದೈನಂದಿನ ಹೊರ ರೋಗಿ ವಿಭಾಗ ಮತ್ತು ಆಯ್ದ ಶಸ್ತ್ರಚಿಕಿತ್ಸೆಗಳು ಇಂದು ಲಭ್ಯವಿರುವುದಿಲ್ಲ.