ಲಿಫ್ಟ್ ನಲ್ಲಿ ನಾಯಿಯನ್ನು ಕರೆದೊಯ್ಯುವ ವಿಚಾರಕ್ಕೆ ಮಹಿಳೆಯೊಂದಿಗೆ ಜಗಳ; ವಿಡಿಯೊ ವೈರಲ್
ನೊಯ್ಡಾ: ನಾಯಿಯೊಂದನ್ನು ಲಿಫ್ಟ್ ನಲ್ಲಿ ಕರೆದುಕೊಂಡು ಹೋಗುವ ವಿಚಾರ ನೊಯ್ಡಾದ ಅಪಾರ್ಟ್ ಮೆಂಟ್ ಒಂದರ ನಿವಾಸಿಗಳ ನಡುವೆ ಮಾರಾಮಾರಿಗೆ ಕಾರಣವಾಗಿರುವ ಘಟನೆ ಸೋಮವಾರ ನಡೆದಿದೆ. ಸೆಕ್ಟರ್ 108ರಲ್ಲಿನ ಪಾರ್ಕ್ ಲಾರೆಟ್ ಸೊಸೈಟ್ ಅಪಾರ್ಟ್ ಮೆಂಟ್ ನ ಲಿಫ್ಟ್ ನಲ್ಲಿ ಮಹಿಳೆಯೊಬ್ಬರು ನಾಯಿಯನ್ನು ಕರೆದುಕೊಂಡು ಹೋಗಲು ನಿವೃತ್ತ ನಾಗರಿಕ ಸೇವಾಧಿಕಾರಿಯೊಬ್ಬರು ಅವಕಾಶ ನೀಡದೆ ಇದ್ದುದರಿಂದ ಅವರಿಬ್ಬರ ನಡುವೆ ಜಗಳ ನಡೆದಿದೆ. ಘಟನೆಯ ವಿಡಿಯೋ ವೈರಲ್ ಆಗಿದೆ.
ಪರಸ್ಪರ ವಾಗ್ವಾದಕ್ಕಿಳಿದಿದ್ದ ನಿವೃತ್ತ ಅಧಿಕಾರಿ ಹಾಗೂ ನಾಯಿಯ ಮಾಲಕಿ ಘಟನೆಯನ್ನು ತಮ್ಮ ಮೊಬೈಲ್ ಫೋನ್ ಗಳಲ್ಲಿ ಚಿತ್ರೀಕರಿಸಿಕೊಳ್ಳಲು ಆರಂಭಿಸಿದ್ದಾರೆ. ಕೂಡಲೇ ನಾಯಿಯ ಮಾಲಕಿಯು ನಿವೃತ್ತ ಅಧಿಕಾರಿಯ ಮೊಬೈಲ್ ಫೋನ್ ಅನ್ನು ಕಿತ್ತುಕೊಂಡಿದ್ದರಿಂದ ಇಬ್ಬರ ನಡುವೆ ಮಾರಾಮಾರಿ ನಡೆದಿರುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿದೆ. .
ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ನಂತರ ಘಟನಾ ಸ್ಥಳಕ್ಕೆ ಧಾವಿಸಿರುವ ಪೊಲೀಸರು, ಅಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಇಬ್ಬರೂ ವ್ಯಕ್ತಿಗಳು ಪೊಲೀಸರಿಗೆ ತಪ್ಪೊಪ್ಪಿಗೆ ಪತ್ರ ನೀಡಿದ್ದು, ತಮ್ಮ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.
ಹೀಗಿದ್ದೂ, ಈ ಕುರಿತು ತನಿಖೆಯುನ್ನು ಮುಂದುವರಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ನಾಯಿಗಳನ್ನು ಲಿಫ್ಟ್ ನಲ್ಲಿ ಕೊಂಡೊಯ್ಯಬಹುದೇ ಎಂಬ ವಿಚಾರ ಸಾಕು ಪ್ರಾಣಿಗಳ ಮಾಲಕರು ಹಾಗೂ ಅಪಾರ್ಟ್ ಮೆಂಟ್ ನಿವಾಸಿಗಳ ನಡುವೆ ದೇಶಾದ್ಯಂತ ವಿವಾದಕ್ಕೆ ಕಾರಣವಾಗಿದೆ. ಇತ್ತೀಚಿನ ದಿನಗಳಲ್ಲಿ ಇಂತಹ ಘರ್ಷಣೆಯ ನಿದರ್ಶನಗಳು ವರದಿಯಾಗುತ್ತಲೂ ಇವೆ.
ನೊಯ್ಡಾದ ಹಲವಾರು ಅಪಾರ್ಟ್ ಮೆಂಟ್ ಗಳು ಲಿಫ್ಟ್ ನಲ್ಲಿ ನಾಯಿ ಕೊಂಡೊಯ್ಯುವುದನ್ನು ನಿಷೇಧಿಸಿದ್ದರೂ, ಸಾಕು ಪ್ರಾಣಿಗಳ ಮಾಲಕರು ಈ ನಿರ್ದೇಶನವನ್ನು ಕಾನೂನಾತ್ಮಕವಾಗಿ ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ವಾದಿಸುತ್ತಿದ್ದಾರೆ. ಆದರೆ, ನಾಯಿಗಳನ್ನು ಲಿಫ್ಟ್ ನಲ್ಲಿ ಕೊಂಡೊಯ್ಯುವಾಗ ನಾಯಿಗಳು ಇತರರ ಮೇಲೆ ದಾಳಿ ನಡೆಸಿರುವ ಹಲವಾರು ನಿದರ್ಶನಗಳಿರುವುದು ಇಂತಹ ನಡೆಯ ಹಿಂದಿರುವ ಕಾರಣ ಎಂದು ಅಪಾರ್ಟ್ ಮೆಂಟ್ ಸಂಘಟನೆಗಳು ಹೇಳುತ್ತಿವೆ.