ಮಣಿಪುರದೊಂದಿಗೆ ಹೋಲಿಸಬೇಡಿ: ಸಂದೇಶ್ಖಾಲಿ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂಕೋರ್ಟ್
ಸಂದೇಶ್ಖಾಲಿ | Photo: indiatoday.in
ಹೊಸದಿಲ್ಲಿ: ಪಶ್ಚಿಮ ಬಂಗಾಳದ ಸಂದೇಶ್ಖಾಲಿಯಲ್ಲಿ ಮಹಿಳೆಯರ ಮೇಲೆ ನಡೆದಿದೆಯೆನ್ನಲಾದ ಲೈಂಗಿಕ ಕಿರುಕುಳದ ಕುರಿತು ವಿಶೇಷ ತನಿಖಾ ತಂಡದ ತನಿಖೆಗೆ ಆದೇಶಿಸಬೇಕು ಎಂದು ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಲು ಸೋಮವಾರ ಸುಪ್ರೀಂಕೋರ್ಟ್ ನಿರಾಕರಿಸಿದೆ.
ಕಳೆದ ವರ್ಷದ ಮೇ ತಿಂಗಳಲ್ಲಿ ಮಣಿಪುರದಲ್ಲಿ ಸ್ಫೋಟಗೊಂಡಿದ್ದ ಹಿಂಸಾಚಾರದ ಕುರಿತು ತನಿಖೆ ನಡೆಸಲು ಸುಪ್ರೀಂಕೋರ್ಟ್ ಉಸ್ತುವಾರಿಯಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು ಎಂದು ಅರ್ಜಿದಾರರು ವಾದಿಸಿದ್ದರು. ಆದರೆ, ಮಣಿಪುರದ ಪರಿಸ್ಥಿತಿಯೊಂದಿಗೆ ಸಂದೇಶ್ಖಾಲಿ ವಿಷಯವನ್ನು ಹೋಲಿಸಬೇಡಿ ಎಂದು ನ್ಯಾ. ಬಿ.ವಿ.ನಾಗರತ್ನ ಅವರು ಅರ್ಜಿದಾರರಿಗೆ ಸೂಚಿಸಿದರು.
ಕಲ್ಕತ್ತಾ ನ್ಯಾಯಾಲಯವು ಈಗಾಗಲೇ ವಿಷಯದ ಗಾಂಭೀರ್ಯತೆಯನ್ನು ಗಮನಕ್ಕೆ ತೆಗೆದುಕೊಂಡಿದ್ದು, ಅರ್ಜಿದಾರರು ತಾವು ಬಯಸುವ ಪರಿಹಾರವನ್ನು ಅಲ್ಲಿಂದಲೇ ಪಡೆಯಬಹುದು ಎಂದು ನ್ಯಾ ಬಿ.ವಿ.ನಾಗರತ್ನ ಹಾಗೂ ನ್ಯಾ. ಜಾರ್ಜ್ ಮಾಸಿಹ್ ಅವರನ್ನೊಳಗೊಂಡ ನ್ಯಾಯಪೀಠವು ಅಭಿಪ್ರಾಯ ಪಟ್ಟಿತು.
ಹೈಕೋರ್ಟ್ ಮೊರೆ ಹೋಗಲು ಅರ್ಜಿದಾರರಿಗೆ ಸ್ವಾತಂತ್ರ್ಯ ನೀಡಿದ ನ್ಯಾಯಪೀಠವು, "ಈ ವಿಷಯದಲ್ಲಿ ಎರಡೆರಡು ವೇದಿಕೆಗಳ ಅಗತ್ಯವಿಲ್ಲ" ಎಂದು ಹೇಳಿತು.
ಇದರ ಬೆನ್ನಿಗೇ ಅರ್ಜಿದಾರರಾದ ವಕೀಲ ಅಲಖ್ ಅಲೋಕ್ ಶ್ರೀವಾಸ್ತವ ತಮ್ಮ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಿಂಪಡೆದಿದ್ದರಿಂದ, ನ್ಯಾಯಪೀಠವು ಅರ್ಜಿಯನ್ನು ವಜಾಗೊಳಿಸಿತು.