ನ.1ರಿಂದ ನ.19ರವರೆಗೆ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಬೇಡಿ: ಖಾಲಿಸ್ತಾನಿ ಪ್ರತ್ಯೇಕತಾವಾದಿ ಪನ್ನುನ್ ಬೆದರಿಕೆ
ಖಾಲಿಸ್ತಾನಿ ಪ್ರತ್ಯೇಕತಾವಾದಿ ಗುರ್ ಪತ್ವಂತ್ ಸಿಂಗ್ ಪನ್ನುನ್ (PTI)
ಹೊಸದಿಲ್ಲಿ: ನವೆಂಬರ್ 1-19ರ ನಡುವೆ ಏರ್ ಇಂಡಿಯಾ ವಿಮಾನಗಳ ಮೇಲೆ ದಾಳಿ ನಡೆಯುವ ಸಾಧ್ಯತೆ ಇದ್ದು, ಈ ಅವಧಿಯಲ್ಲಿ ಏರ್ ಇಂಡಿಯಾ ವಿಮಾನಗಳಲ್ಲಿ ಪ್ರಯಾಣಿಸದಂತೆ ಖಾಲಿಸ್ತಾನಿ ಪ್ರತ್ಯೇಕತಾವಾದಿ ಗುರ್ ಪತ್ವಂತ್ ಸಿಂಗ್ ಪನ್ನುನ್ ಬೆದರಿಕೆ ಹಾಕಿದ್ದಾನೆ. ಕಾಕತಾಳೀಯವೆಂಬಂತೆ, ಈ ಅವಧಿಯು ಸಿಖ್ ನರಮೇಧ ನಡೆದು 40 ವರ್ಷ ಪೂರ್ಣವಾಗುವುದನ್ನು ಸಂಕೇತಿಸುತ್ತಿದೆ.
ಕೆನಡಾ ಮತ್ತು ಅಮೆರಿಕಗಳಲ್ಲಿ ದ್ವಿಪೌರತ್ವ ಹೊಂದಿರುವ ಸಿಖ್ಸ್ ಫಾರ್ ಜಸ್ಟೀಸ್ ಸಂಸ್ಥಾಪಕ ಗುರ್ ಪತ್ವಂತ್ ಸಿಂಗ್ ಪನ್ನುನ್, ಕಳೆದ ವರ್ಷ ಕೂಡಾ ಇದೇ ರೀತಿಯ ಬೆದರಿಕೆಯನ್ನು ಒಡ್ಡಿದ್ದರು. ವಿವಿಧ ಭಾರತೀಯ ವಿಮಾನ ಯಾನ ಸಂಸ್ಥೆಗಳು ಹಲವಾರು ಹುಸಿ ಬಾಂಬ್ ಬೆದರಿಕೆಗಳನ್ನು ಸ್ವೀಕರಿಸುತ್ತಿರುವ ಬೆನ್ನಲ್ಲೇ ಪನ್ನುನ್ ನಿಂದ ಈ ಹೊಸ ಬೆದರಿಕೆ ಬಂದಿದೆ.
ಸಿಖ್ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆ ಬಳಿಕ ಭಾರತ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ಸಂಬಂಧ ಬಿಗಡಾಯಿಸಿರುವ ಹೊತ್ತಿನಲ್ಲೇ ಈ ಹುಸಿ ಬಾಂಬ್ ಕರೆಗಳೂ ಬರತೊಡಗಿವೆ.
ನವೆಂಬರ್, 2023ರಲ್ಲಿ ವಿಡಿಯೊವೊಂದನ್ನು ಬಿಡುಗಡೆ ಮಾಡಿದ್ದ ಪನ್ನುನ್, ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮರು ನಾಮಕರಣ ಮಾಡಲಾಗುವುದು ಹಾಗೂ ನ. 19ರಂದು ವಿಮಾನ ನಿಲ್ದಾಣ ಮುಚ್ಚಿರಲಿದೆ ಎಂದು ಹೇಳಿದ್ದ. ಇದರೊಂದಿಗೆ ಆ ದಿನ ಏರ್ ಇಂಡಿಯಾ ವಿಮಾನಗಳಲ್ಲಿ ಪ್ರಯಾಣ ಬೆಳೆಸದಂತೆ ಪ್ರಯಾಣಿಕರಿಗೆ ಎಚ್ಚರಿಕೆ ನೀಡಿದ್ದ. ಈ ಸಂಬಂಧ, ರಾಷ್ಟ್ರೀಯ ತನಿಖಾ ದಳವು ಪನ್ನುನ್ ವಿರುದ್ಧ ಯುಎಪಿಎ ಕಾಯ್ದೆಯಡಿ ಕ್ರಿಮಿನಲ್ ಪಿತೂರಿ, ಎರಡು ಧರ್ಮಗಳ ನಡುವೆ ದ್ವೇಷ ಪ್ರಚೋದನೆ ಸೇರಿ ವಿವಿಧ ಆರೋಪಗಳಡಿ ಪ್ರಕರಣ ದಾಖಲಿಸಿಕೊಂಡಿತ್ತು.
ಇದಾದ ನಂತರ ಕಳೆದ ಡಿ. 13ರಂದು ಸಂಸತ್ ಭವನದ ಮೇಲೆ ದಾಳಿ ನಡೆಸಲಾಗುವುದು ಎಂದು ಪನ್ನುನ್ ಬೆದರಿಕೆ ಒಡ್ಡಿದ್ದ. ಡಿ.13 ಸಂಸತ್ ಭವನದ ಮೇಲೆ ನಡೆದಿದ್ದ ಭಯೋತ್ಪಾದಕರ ದಾಳಿಯ ದಿನವಾಗಿದೆ.