ಅಳುಕಬೇಡಿ, ನಾನು ಯಾವುದೇ ಪ್ರಕಟಣೆ ಮಾಡುತ್ತಿಲ್ಲ: ನಿವೃತ್ತಿಯ ವದಂತಿಗಳನ್ನು ಅಲ್ಲಗಳೆದ ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ | PC : PTI
ಬೆಂಗಳೂರು: ತಮ್ಮ ನಿವೃತ್ತಿಯ ವದಂತಿಗಳನ್ನು ಶನಿವಾರ ಅಲ್ಲಗಳೆದಿರುವ ಭಾರತ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ, ಈ ಹೊತ್ತಿನಲ್ಲಿ ನಾನು ನಿವೃತ್ತಿಯ ಕುರಿತು ಯಾವುದೇ ಯೋಚನೆ ಮಾಡಿಲ್ಲ ಹಾಗೂ ಆಟವವನ್ನು ಆನಂದಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ಅಲ್ಲದೆ, ನನ್ನೊಳಗಿನ ಸ್ಪರ್ಧಾತ್ಮಕ ಮನೋಭಾವ ಇನ್ನೂ ಹಾಗೇ ಉಳಿದಿದೆ ಎಂದು ಘೋಷಿಸಿದ್ದಾರೆ.
ದುಬೈನಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡ ಚಾಂಪಿಯನ್ ಆಗಿ ಹೊರಹೊಮ್ಮುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವಿರಾಟ್ ಕೊಹ್ಲಿ, ತಮ್ಮ ನಿವೃತ್ತಿಯ ಕುರಿತು ಹಳೆಯ ವದಂತಿಗಳಿಗೆ ತಣ್ಣೀರೆರಚಿದ್ದಾರೆ. ಇದಕ್ಕೂ ಮುನ್ನ, ಭಾರತ ತಂಡದ ನಾಯಕ ರೋಹಿತ್ ಶರ್ಮ ಕೂಡಾ ತಮ್ಮ ನಿವೃತ್ತಿಯ ವದಂತಿಗಳನ್ನು ತಳ್ಳಿ ಹಾಕಿದ್ದರು.
ಆರ್ಸಿಬಿ ಇನ್ನೋವೇಶನ್ ಲ್ಯಾಬ್ ನಲ್ಲಿ ನಡೆದ ಮಾತುಕತೆ ಅವಧಿಯಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ, “ಅಳುಕಬೇಡಿ. ನಾನು ಯಾವುದೇ ಪ್ರಕಟಣೆಯನ್ನು ಮಾಡುತ್ತಿಲ್ಲ. ಇಲ್ಲಿಯವರೆಗೆ ಎಲ್ಲವೂ ಚೆನ್ನಾಗಿದೆ. ನಾನೀಗಲೂ ಆಟವಾಡುವುದನ್ನು ಪ್ರೀತಿಸುತ್ತೇನೆ” ಎಂದು ಹೇಳಿದ್ದಾರೆ.
ನಾನೀಗ ಯಾವುದೇ ಸಾಧನೆಯ ಮೈಲಿಗಲ್ಲು ನಿರ್ಮಿಸಲು ಬಯಸುತ್ತಿಲ್ಲ. ಆದರೆ, ನಾನು ಕ್ರಿಕೆಟ್ ಅನ್ನು ಆನಂದಕ್ಕಾಗಿ ಆಡುತ್ತಿದ್ದೇನೆ ಎಂದೂ ತಿಳಿಸಿದ್ದಾರೆ.
“ನನ್ನ ಆಟವೀಗ ಸಂತೋಷ, ಸಂಭ್ರಮ, ಸ್ಪರ್ಧಾತ್ಮಕತೆ ಹಾಗೂ ಆಟದೆಡೆಗಿನ ಪ್ರೀತಿಯ ಹಂತಕ್ಕೆ ಇಳಿದಿದೆ. ಆಟದಲ್ಲಿ ಅದು ಎಲ್ಲಿಯವರೆಗೆ ಇರುತ್ತದೊ, ಅಲ್ಲಿಯವರೆಗೆ ನಾನು ಆಡುವುದನ್ನು ಮುಂದುವರಿಸುತ್ತೇನೆ. ನಾನಿಂದು ಹೇಳಿದಂತೆ, ನಾನೀಗ ಯಾವುದೇ ಸಾಧನೆಗಾಗಿ ಆಟವಾಡುತ್ತಿಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಆದರೆ, ವಯಸ್ಸಾಗುತ್ತಿರುವುದರಿಂದ ನನ್ನ ಆಟದಲ್ಲಿ ಉತ್ಕೃಷ್ಟತೆ ಉಳಿಸಿಕೊಳ್ಳುವುದು ಸ್ವಲ್ಪ ಕಷ್ಟವಾಗುತ್ತಿದೆ ಎಂದು ವಿರಾಟ್ ಕೊಹ್ಲಿ ಒಪ್ಪಿಕೊಂಡಿದ್ದಾರೆ.
ಒತ್ತಡದಿಂದ ದೂರಾಗಲು ಹೊರಗಿನ ಸದ್ದುಗಳಿಂದ ದೂರ ಉಳಿಯುವುದು ನನ್ನ ಪಾಲಿಗೆ ಹೆಚ್ಚು ಮುಖ್ಯವಾಗಿದೆ ಎಂದೂ ಅವರು ಹೇಳಿದ್ದಾರೆ.