ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ದಿನದಂದು ಪ್ರತಿಭಟನೆ ನಡೆಸಕೂಡದು: ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದ ಟಿಐಎಸ್ಎಸ್
Photo: Facebook/TISS
ಮುಂಬೈ: ಜನವರಿ 22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ದಿನದಂದು ಕ್ಯಾಂಪಸ್ ನಲ್ಲಿ ಯಾವುದೇ ಪ್ರತಿಭಟನೆ ನಡೆಸಕೂಡದು ಎಂದು ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್ ತನ್ನ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದೆ ಎಂದು The Indian Express ದೈನಿಕ ವರದಿ ಮಾಡಿದೆ.
ಅಂತಹ ಪ್ರತಿಭಟನೆಗಳಲ್ಲಿ ಪಾಲ್ಗೊಳ್ಳುವವರ ವಿರುದ್ಧ ಕಾನೂನು ಜಾರಿ ಪ್ರಾಧಿಕಾರಗಳು ಕ್ರಮ ಕೈಗೊಳ್ಳಲಿವೆ ಎಂದು ಜನವರಿ 18ರಂದು ಹೊರಡಿಸಿರುವ ನೋಟಿಸ್ ನಲ್ಲಿ ಸಂಸ್ಥೆಯು ಎಚ್ಚರಿಸಿದೆ.
“ಈ ಸೂಚನೆಯು ಶೈಕ್ಷಣಿಕ ಸಂಸ್ಥೆಯ ಕ್ಯಾಂಪಸ್ ನಲ್ಲಿ ಶಾಂತಿಯುತ ವಾತಾವರಣವನ್ನು ಕಾಪಾಡುವ ಉದ್ದೇಶ ಹೊಂದಿದೆ” ಎಂದು ಹೆಸರೇಳಲಿಚ್ಛಿಸದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಅದೇ ದಿನ ಮತ್ತೊಂದು ನೋಟಿಸ್ ಅನ್ನು ಹೊರಡಿಸಿರುವ ಸಂಸ್ಥೆಯು, ಜನವರಿ 22ರಂದು ಕ್ಯಾಂಪಸ್ ನಲ್ಲಿ ಆಯೋಜಿಸಲಾಗಿದ್ದ ಉಪನ್ಯಾಸಗಳು ಹಾಗೂ ವಿಚಾರ ಸಂಕಿರಣಗಳನ್ನು ಅಮಾನತುಗೊಳಿಸಲಾಗಿದ್ದು, ಮಾರ್ಗಸೂಚಿಯ ಪ್ರಕಾರ, ಅವುಗಳ ದಿನಾಂಕವನ್ನು ಮರು ನಿಗದಿಗೊಳಿಸಲಾಗುವುದು ಎಂದೂ ಹೇಳಿದೆ.
ಈ ನಡುವೆ, ಪ್ರಾಣ ಪ್ರತಿಷ್ಠಾಪನೆ ದಿನದಂದು ಯಾವುದೇ ಪ್ರತಿಭಟನೆಗಳು ಘೋಷಣೆಯಾಗದೆ ಇರುವುದರಿಂದ ಇಂತಹ ನೋಟಿಸ್ ಜಾರಿಗೊಳಿಸಿರುವುದು ನಿರಂಕುಶಾಧಿಕಾರವಾಗಿದೆ ಎಂದು ಟಾಟಾ ಸಮಾಜ ವಿಜ್ಞಾನಗಳ ಸಂಸ್ಥೆಯು ವಿದ್ಯಾರ್ಥಿ ಸಂಘಟನೆ ಟೀಕಿಸಿದೆ.