ಮೋದಿ ವಿರುದ್ಧ ಹಿಂಸೆ ಪ್ರಚೋದಿಸುವ ಮಾತುಗಳನ್ನು ಆಡದಿರಿ : ಪ್ರತಿಪಕ್ಷಗಳಿಗೆ ಬಿಜೆಪಿ ಒತ್ತಾಯ
ಟ್ರಂಪ್ ಹತ್ಯಾಯತ್ನ ಘಟನೆ ಉಲ್ಲೇಖ
ನರೇಂದ್ರ ಮೋದಿ , ಡೊನಾಲ್ಡ್ ಟ್ರಂಪ್ | PTI
ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಹಿಂಸೆಯನ್ನು ಪ್ರಚೋದಿಸುವ ಮಾತುಗಳನ್ನು ಆಡದಂತೆ ಬಿಜೆಪಿಯು ಗುರುವಾರ ಪ್ರತಿಪಕ್ಷಗಳಿಗೆ, ಅದರಲ್ಲೂ ಮುಖ್ಯವಾಗಿ ಕಾಂಗ್ರೆಸ್ ಪಕ್ಷ ಮತ್ತು ಅದರ ನಾಯಕ ರಾಹುಲ್ ಗಾಂಧಿ ಅವರನ್ನು ಒತ್ತಾಯಿಸಿದೆ. ಇದಕ್ಕಾಗಿ ಅದು ಜುಲೈ 13ರಂದು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ನಡೆದ ಹತ್ಯಾ ಯತ್ನ ಮತ್ತು 2022ರಲ್ಲಿ ನಡೆದ ಜಪಾನ್ ನಾಯಕ ಶಿಂರೊ ಅಬೆ ಹತ್ಯೆಯನ್ನು ಉಲ್ಲೇಖಿಸಿದೆ.
ತಮ್ಮ ಅಲ್ಪಾವಧಿ ರಾಜಕೀಯ ಗುರಿಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜಕೀಯ ನಾಯಕರು ತಮ್ಮ ಭಾಷಣಗಳಲ್ಲಿ ಮಾಡಿರುವ ಹಿಂಸಾತ್ಮಕ ಮನವಿಗಳೇ ಅಬೆ ಹತ್ಯೆ ಮತ್ತು ಟ್ರಂಪ್ ಯತ್ನಾಯತ್ನಕ್ಕೆ ಕಾರಣವಾಯಿತು ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಸುಧಾಂಶು ತ್ರಿವೇದಿ ಹೇಳಿದರು.
ಮೋದಿ ವಿರುದ್ಧ ಹಿಂಸಾಚಾರ ಪ್ರಚೋದಿಸಬಲ್ಲ ಭಾಷೆಯನ್ನು ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಬಳಸುತ್ತಿದ್ದಾರೆ ಎಂದು ಅವರು ಆರೋಪಿಸಿದರು. ‘‘ಕಾಂಗ್ರೆಸ್ ನಾಯಕರು ತಮ್ಮ ಭಾಷಣಗಳಲ್ಲಿ ‘‘ಸಾವು’’ ಮತ್ತು ‘‘ಗೋರಿ ತೋಡುವುದು’’ ಮುಂತಾದ ಹಿಂಸಾತ್ಮಕ ಪದಗಳನ್ನು ಬಳಸಿದ್ದಾರೆ. ರಾಜಕೀಯವೇ ಬೇರೆ, ಜನರನ್ನು ಹಿಂಸೆಗೆ ಪ್ರಚೋದಿಸುವುದೇ ಬೇರೆ’’ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸುಧಾಂಶು ತ್ರಿವೇದಿ ಹೇಳಿದರು.
2022ರ ಜನವರಿಯಲ್ಲಿ ಮೋದಿ ಅವರ ಪಂಜಾಬ್ ಭೇಟಿಯ ವೇಳೆ ಸಂಭವಿಸಿದ ಭದ್ರತಾ ವೈಫಲ್ಯವನ್ನು ಅವರು ಪ್ರಸ್ತಾವಿಸಿದರು. ಅಂದು ಫಿರೋಝ್ಪುರಕ್ಕೆ ಹೋಗುವ ರಸ್ತೆಯನ್ನು ಪ್ರತಿಭಟನಾನಿರತ ರೈತರ ಗುಂಪೊಂದು ಮುಚ್ಚಿತ್ತು. ಹಾಗಾಗಿ, ಪ್ರಧಾನಿ ಸುಮಾರು 20 ನಿಮಿಷಗಳ ಕಾಲ ಫ್ಲೈಓವರೊಂದರಲ್ಲಿ ಸಿಕ್ಕಿಹಾಕಿಕೊಂಡಿದ್ದರು. 2013 ಅಕ್ಟೋಬರ್ನಲ್ಲಿ, ಅಂದಿನ ಬಿಜೆಪಿ ಪ್ರಧಾನಿ ಅಭ್ಯರ್ಥಿ ಮೋದಿ ಬಿಹಾರದಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡುತ್ತಿದ್ದಾಗ ನಡೆದ ಸರಣಿ ಬಾಂಬ್ ಸ್ಫೋಟಗಳನ್ನೂ ಅವರು ಪಸ್ತಾವಿಸಿದರು.
‘‘ಮೋದಿ ಮತ್ತು ಅಂದಿನ ಬಿಜೆಪಿ ಅಧ್ಯಕ್ಷ ರಾಜ್ನಾಥ್ ಸಿಂಗ್ 2013ರಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದರು. ಅವರಿಬ್ಬರಿಗೂ ಝಡ್ ಪ್ಲಸ್ ಭದ್ರತೆಯನ್ನು ನೀಡಲಾಗಿತ್ತು. ಆಗ ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರವಿತ್ತು. ಅದು ದೊಡ್ಡ ಭದ್ರತಾ ವೈಫಲ್ಯವಾಗಿತ್ತು’’ ಎಂದು ತ್ರಿವೇದಿ ಹೇಳಿದರು.
ಬಿಜೆಪಿ ಸರಕಾರವು ರಾಜಕೀಯ ನಾಯಕರ ಭದ್ರತೆಯನ್ನು ಗಂಭೀರವಾಗಿ ಹಾಗೂ ಮಹತ್ವದ ವಿಷಯವಾಗಿ ತೆಗೆದುಕೊಂಡಿದೆ ಎಂದು ಅವರು ಹೇಳಿದರು.