ಸ್ವಾತಂತ್ರ್ಯ ದಿನದಂದು ಪಾರಿವಾಳ ಹಾರಲು ವಿಫಲ | ತನಿಖೆಗೆ ಪೊಲೀಸ್ ಅಧಿಕಾರಿ ಆಗ್ರಹ!
ನಿಜ ಜೀವನದ 'ಪಂಚಾಯತ್' ಎಂದು ಹೋಲಿಸಿ ವೀಡಿಯೊ ವೈರಲ್
PC : X \ @SachinGuptaUP
ಹೊಸದಿಲ್ಲಿ: ಛತ್ತೀಸ್ಗಢದ ಮುಂಗೇಲಿ ಜಿಲ್ಲೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಬಿಡುಗಡೆ ಮಾಡಿದ ಪಾರಿವಾಳ ಹಾರಲು ವಿಫಲವಾಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆಯನ್ನು ಜನಪ್ರಿಯ ವೆಬ್ ಸರಣಿ 'ಪಂಚಾಯತ್' ಸೀಸನ್ 3 ರ ದೃಶ್ಯಕ್ಕೆ ಹೋಲಿಕೆ ಮಾಡಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ವರಿಷ್ಠಾಧಿಕಾರಿ ಗಿರಿಜಾ ಶಂಕರ್ ಜೈಸ್ವಾಲ್ ಪ್ರತಿಕ್ರಿಯಿಸಿ, ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹಿಸಿದ್ದಾರೆ.
ಬಿಜೆಪಿ ಶಾಸಕ ಮತ್ತು ಮಾಜಿ ಸಚಿವ ಪುನ್ನುಲಾಲ್ ಮೋಹ್ಲೆ, ಕಲೆಕ್ಟರ್ ರಾಹುಲ್ ಡಿಯೋ ಮತ್ತು ಎಸ್ಪಿ ಜೈಸ್ವಾಲ್ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಶಾಂತಿ ಮತ್ತು ಸ್ವಾತಂತ್ರ್ಯದ ಸಂಕೇತವಾಗಿ ಪಾರಿವಾಳಗಳನ್ನು ಬಿಡುಗಡೆ ಮಾಡಲಾಯಿತು. ಶಾಸಕರು ಹಾರಿಸಿದ ಪಾರಿವಾಳ ಹಾರಿಹೋದರೆ, ಎಸ್ಪಿ ಹಾರಿಸಿದ ಪಾರಿವಾಳ ಹಾರಲಾಗದೇ ನೆಲಕ್ಕೆ ಬಿದ್ದಿತು.
ಈ ಘಟನೆಯ ಕುರಿತು ಎಸ್ಪಿ ಗಿರಿಜಾ ಶಂಕರ್ ಜೈಸ್ವಾಲ್ ಅವರು ಪತ್ರ ಬರೆದು, ಘಟನೆಗೆ ಕಾರಣರಾದ ಅಧಿಕಾರಿಯ ವಿರುದ್ಧ ಶಿಸ್ತು ಕ್ರಮಕ್ಕೆ ಸೂಚಿಸಿದ್ದಾರೆ. "ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ, ಪಾರಿವಾಳವು ಹಾರಲಾಗದೇ ನೆಲದ ಮೇಲೆ ಬಿದ್ದ ಘಟನೆಯು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಧ್ವಜಾರೋಹಣ ಕಾರ್ಯಕ್ರಮದಲ್ಲಿ ಹಾರಲಾಗದ ಅಸ್ವಸ್ಥ ಪಾರಿವಾಳವನ್ನು ತಂದ ಕಾರಣ, ಪಾರಿವಾಳ ಕೆಳಕ್ಕೆ ಬಿದ್ದಿದೆ. ಈ ಘಟನೆಯೇನಾದರೂ ಮುಖ್ಯ ಅತಿಥಿಯವರ ಕೈಯ್ಯಲ್ಲಿ ನಡೆದಿದ್ದರೆ ಇನ್ನಷ್ಟು ಅಸಭ್ಯವಾಗುತ್ತಿತ್ತು” ಎಂದು ತಿಳಿಸಿದ್ದಾರೆ.
“ಸ್ವಾತಂತ್ರ್ಯ ದಿನಾಚರಣೆಗೆ ಮುನ್ನ ಎಲ್ಲಾ ಇಲಾಖೆ ಮುಖ್ಯಸ್ಥರ ಸಭೆ ನಡೆಸಿ, ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ವಿವಿಧ ಇಲಾಖೆಗಳಿಗೆ ಜವಾಬ್ದಾರಿ ವಹಿಸಲಾಗಿತ್ತು. ಪಾರಿವಾಳ ತಂದ ಅಧಿಕಾರಿ ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಿಲ್ಲ.” ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.