ಅಸ್ಸಾಂನ ಡಾ. ಬಿಭೂತಿ ಲಹ್ಕರ್ ಗೆ ವನ್ಯಜೀವಿ ಸಂರಕ್ಷಣೆಗಾಗಿ ಪ್ರತಿಷ್ಠಿತ ಅರ್ಥ್ವಾಚ್ ʼನೆವಿಲ್ಲೆ ಶುಲ್ಮನ್ʼ ಪ್ರಶಸ್ತಿ
ಡಾ ಬಿಭೂತಿ ಪ್ರಸಾದ್ ಲಹ್ಕರ್ | PC : X
ಗುವಾಹಟಿ : ಹೆಸರಾಂತ ಪರಿಸರ ಸಂಸ್ಥೆ ಅರ್ಥ್ವಾಚ್ ಯುರೋಪ್(Earthwatch Europe) ಹಿರಿಯ ವಿಜ್ಞಾನಿ ಡಾ ಬಿಭೂತಿ ಪ್ರಸಾದ್ ಲಹ್ಕರ್ ಅವರಿಗೆ ವನ್ಯಜೀವಿ ಸಂರಕ್ಷಣೆಗಾಗಿ 2024-25ನೇ ಸಾಲಿನ ಪ್ರತಿಷ್ಠಿತ ʼನೆವಿಲ್ಲೆ ಶುಲ್ಮನ್ ಪ್ರಶಸ್ತಿʼ(Neville Shulman Award) ನೀಡಿ ಗೌರವಿಸಿದೆ.
ಜೀವವೈವಿಧ್ಯ ಸಂರಕ್ಷಣಾ ಸಂಸ್ಥೆ ಆರಣ್ಯಕ್ ನ ಡಾ ಲಹ್ಕರ್ ಈ ಬಾರಿ ಈ ಪ್ರಶಸ್ತಿಯನ್ನು ಪಡೆದ ಏಕೈಕ ಭಾರತೀಯರಾಗಿದ್ದಾರೆ. ವಿಶ್ವದ ಇನ್ನಿಬ್ಬರು ವಿಜ್ಞಾನಿಗಳಿಗೆ ಕೂಡ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ʼನೆವಿಲ್ಲೆ ಶುಲ್ಮನ್ʼ ಅರ್ಥ್ವಾಚ್ ಪ್ರಶಸ್ತಿ ಪರಿಸರಗಳಿಗೆ ಸಂಬಂಧಿಸಿದ ಸಂಶೋಧನೆ ಮತ್ತು ಜಾಗತಿಕ ಪರಿಸರ ಸಮಸ್ಯೆಗಳಿಗೆ ಪರಿಹಾರಗಳ ಕಂಡುಕೊಳ್ಳುವ ಗುರಿಯನ್ನು ಹೊಂದಿದೆ. ಈ ಸಂಸ್ಥೆ ಇಂತಹ ಯೋಜನೆಗಳಲ್ಲಿ ತೊಡಗಿಸಿಕೊಂಡಿರುವ ಸಂಶೋಧಕರಿಗೆ ಧನಸಹಾಯವನ್ನು ಒದಗಿಸುತ್ತದೆ.
ಆರಣ್ಯಕ್ ಸಂಸ್ಥೆಯ ಆನೆ ಸಂಶೋಧನೆ ಮತ್ತು ಸಂರಕ್ಷಣಾ ವಿಭಾಗದ ಮುಖ್ಯಸ್ಥರಾಗಿರುವ ಡಾ ಬಿಭೂತಿ ಲಹ್ಕರ್, ಈಶಾನ್ಯ ಭಾರತದಲ್ಲಿ ಆನೆ ಸಂರಕ್ಷಣೆ ಮತ್ತು ಹುಲ್ಲುಗಾವಲು ನಿರ್ವಹಣೆಗೆ ತಮ್ಮ ವೃತ್ತಿಜೀವನವನ್ನು ಮೀಸಲಿಟ್ಟಿದ್ದರು.
ಪ್ರಶಸ್ತಿ ಬಗ್ಗೆ ಸಂತಸವನ್ನು ವ್ಯಕ್ತಪಡಿಸಿದ ಡಾ.ಲಹ್ಕರ್, ನನ್ನ ಯೋಜನೆಯು ಅಸ್ಸಾಂನಾದ್ಯಂತ ವನ್ಯಜೀವಿ ಸಂರಕ್ಷಣೆಯಲ್ಲಿ ಯುವ ಸಂಶೋಧಕರನ್ನು ತೊಡಗಿಸಿಕೊಳ್ಳುವುದರ ಮೇಲೆ ಕೇಂದ್ರೀಕರಿಸಿದೆ. ಈಶಾನ್ಯ ಭಾರತದ ಶ್ರೀಮಂತ ಜೀವ ವೈವಿಧ್ಯದ ಭವಿಷ್ಯದ ಪಾಲಕರಾಗುವಂತೆ ಯುವಕರನ್ನು ಸಬಲೀಕರಣಗೊಳಿಸುವ ಗುರಿ ಹೊಂದಿದ್ದೇನೆ. ಈ ಪ್ರಶಸ್ತಿಯನ್ನು ಸ್ವೀಕರಿಸಲು ನಾನು ಉತ್ಸುಕನಾಗಿದ್ದೇನೆ ಮತ್ತು ಪ್ರಶಸ್ತಿಯನ್ನು ನೀಡಿದ ಅರ್ಥ್ವಾಚ್ಗೆ ನನ್ನ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.