ವಿಪಕ್ಷಗಳ ಮೈತ್ರಿಕೂಟ ಸಭೆಯಲ್ಲಿ ಭಾಗಿಯಾಗಿ ಅಚ್ಚರಿ ಮೂಡಿಸಿದ ಕಪಿಲ್ ಸಿಬಲ್
Photo: ANI
ಮುಂಬೈ: ವಿಪಕ್ಷಗಳ ಮೈತ್ರಿಕೂಟವಾದ INDIA ದ ಸಭೆಗೆ ಮಾಜಿ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಅವರು ಅನಿರೀಕ್ಷಿತವಾಗಿ ಭೇಟಿ ನೀಡಿದ್ದು, ಇದರಿಂದ ಕಾಂಗ್ರೆಸ್ ನಾಯಕರು ಅಸಮಾಧಾನಗೊಂಡಿದ್ದಾರೆ ಎಂದು ಮೂಲಗಳು ಹೇಳಿರುವುದಾಗಿ NDTV ವರದಿ ಮಾಡಿದೆ.
ಮುಂಬೈನಲ್ಲಿ ನಡೆಯುತ್ತಿರುವ ಮೈತ್ರಿಕೂಟದ ಸಭೆಗೆ ಕಳೆದ ವರ್ಷ ಕಾಂಗ್ರೆಸ್ ಪಕ್ಷವನ್ನು ತೊರೆದ ಸಿಬಲ್ ಅವರಿಗೆ ಅಧಿಕೃತ ಆಹ್ವಾನ ನೀಡಿಲ್ಲದಿದ್ದರೂ ಅವರು ಭಾಗವಹಿಸಿದ್ದಾರೆ. ಅವರ ಉಪಸ್ಥಿತಿಯು ಕಾಂಗ್ರೆಸ್ ನಾಯಕರನ್ನು ಅಸಮಾಧಾನಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.
ಇಂಡಿಯಾ ಮೈತ್ರಿಕೂಟದ ಸಭೆಯನ್ನು ಮಹಾರಾಷ್ಟ್ರದ ಮಾಜಿ ಸಿಎಂ ಉದ್ಧವ್ ಠಾಕ್ರೆ ಅವರ ನೇತೃತ್ವದ ಶಿವಸೇನೆ ಆಯೋಜಿಸಿರುವುದರಿಂದ, ಸಿಬಲ್ ಅವರ ಉಪಸ್ಥಿತಿಯ ಬಗ್ಗೆ ಹಿರಿಯ ಕಾಂಗ್ರೆಸ್ ನಾಯಕ ಕೆಸಿ ವೇಣುಗೋಪಾಲ್ ಅವರು ಉದ್ಧವ್ ಠಾಕ್ರೆ ಬಳಿಯಲ್ಲೇ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಈ ವೇಳೆ ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಮತ್ತು ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಅವರು ಮಧ್ಯಪ್ರವೇಶಿಸಿದ್ದು, ಮುಂದಿನ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಎಲ್ಲಾ ವಿರೋಧ ರಾಜಕಾರಣಿಗಳನ್ನು ಒಗ್ಗೂಡಿಸುವ ಗುರಿಯನ್ನು ಹೊಂದಿರುವ ಸಭೆಯಲ್ಲಿ ಸಿಬಲ್ ಅವರ ಉಪಸ್ಥಿತಿಯನ್ನು ಒಪ್ಪಿಕೊಳ್ಳುವಂತೆ ವೇಣುಗೋಪಾಲ್ ಅವರ ಮನವೊಲಿಸಿದ್ದಾರೆ.
ಅದೇ ವೇಳೆ, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ತಮಗೆ ಯಾವುದೇ ಅಭ್ಯಂತರವಿಲ್ಲ ಎಂದು ಹೇಳಿದ್ದಾರೆ ಎಂದು ಮೂಲಗಳು ಎನ್ಡಿಟಿವಿಗೆ ತಿಳಿಸಿವೆ.