ದ್ರೌಪದಿಯಂಥ ಸ್ಥಿತಿ: ವಿವಾದ ಎಬ್ಬಿಸಿದ ಲಿಂಗಾನುಪಾತ ಕುರಿತ ಅಜಿತ್ ಪವಾರ್ ಹೇಳಿಕೆ
Photo: PTI
ಪುಣೆ: ಐದು ಮಂದಿಯನ್ನು ವಿವಾಹವಾದ ದ್ರೌಪದಿಯ ದೃಷ್ಟಾಂತವನ್ನು ಉದಾಹರಿಸುವ ಮೂಲಕ ಮಹಾರಾಷ್ಟ್ರ ಉಪಮುಖ್ಯಮಂತ್ರಿ ವಿವಾದ ಸೃಷ್ಟಿಸಿದ್ದಾರೆ. ಜತೆಗೆ ಇಂದಾಪುರದ ಮಹಾಯುತಿಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಿದರೆ ಮಾತ್ರ ಅನುದಾನ ಹಂಚಿಕೆ ಮಾಡುವುದಾಗಿ ಹೇಳಿರುವುದೂ ವಿರೋಧಿಗಳನ್ನು ಕೆರಳಿಸಿದೆ.
ಬಾರಾಮತಿ ಕ್ಷೇತ್ರದಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, "ಕೆಲ ಜಿಲ್ಲೆಗಳಲ್ಲಿ ಲಿಂಗಾನುಪಾತ ಎಷ್ಟು ಕುಸಿದಿದೆ ಎಂದರೆ 1000 ಪುರುಷರಿಗೆ 850 ಮಹಿಳೆಯರಷ್ಟೇ ಇದ್ದಾರೆ. ಕೆಲವೊಂದು ಸಂದರ್ಭದಲ್ಲಿ 1000 ಪುರುಷರಿಗೆ 790 ಮಹಿಳೆಯರಷ್ಟೇ ಇರುವ ಸ್ಥಿತಿಯೂ ಇದೆ. ಇದೇ ಪರಿಸ್ಥಿತಿ ಮುಂದುವರಿದರೆ ಭವಿಷ್ಯ ಭಯಾನಕ. ಇದು ದ್ರೌಪದಿಯ ಸ್ಥಿತಿಯಾಗಿ ಪರಿವರ್ತನೆಯಾಗಲಿದೆ" ಎಂದು ಹೇಳಿದ್ದರು.
ಮಹಾರಾಷ್ಟ್ರ ವಿಕಾಸ ಅಘಾಡಿ ಮುಖಂಡರು, ಅಜಿತ್ ಅವರ "ಮತಕ್ಕಾಗಿ ಅನುದಾನ" ಭರವಸೆಯನ್ನು ಕಟುವಾಗಿ ಟೀಕಿಸಿದ್ದು, ಇದು ಚುನಾವಣಾ ನೀತಿಸಂಹಿತೆಯ ಉಲ್ಲಂಘನೆ ಎಂದು ಆಪಾದಿಸಿದ್ದಾರೆ. ಚುನಾವಣಾ ಆಯೋಗ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.