“ಯಮುನಾ ನದಿ ನೀರನ್ನು ಕುಡಿಯಿರಿ, ನಾನು ನಿಮ್ಮನ್ನು ಆಸ್ಪತ್ರೆಯಲ್ಲಿ ಭೇಟಿಯಾಗುತ್ತೇನೆ”: ಕೇಜ್ರಿವಾಲ್ ಕಾಲೆಳೆದ ರಾಹುಲ್ ಗಾಂಧಿ

ರಾಹುಲ್ ಗಾಂಧಿ (Photo: ANI)
ಹೊಸದಿಲ್ಲಿ: ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ವಿರುದ್ಧದ ತಮ್ಮ ವಾಗ್ದಾಳಿಯನ್ನು ರವಿವಾರ ಕೂಡಾ ಮುಂದುವರಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, “ನೀವು ಯಮುನಾ ನದಿ ನೀರನ್ನು ಕುಡಿಯಿರಿ; ನಾನು ನಿಮ್ಮನ್ನು ಆಸ್ಪತ್ರೆಯಲ್ಲಿ ಭೇಟಿಯಾಗುತ್ತೇನೆ” ಎಂದು ಕಾಲೆಳೆದಿದ್ದಾರೆ.
ಯಮುನಾ ನದಿಯನ್ನು ಸ್ವಚ್ಛಗೊಳಿಸಲಾಗುವುದು ಎಂಬ ಅರವಿಂದ್ ಕೇಜ್ರಿವಾಲ್ ರ ಈ ಹಿಂದಿನ ಭರವಸೆಯನ್ನು ನೆನಪಿಸಿದ ರಾಹುಲ್ ಗಾಂಧಿ, ಯಮುನಾ ನದಿಯಲ್ಲಿ ಮುಳುಗೇಳಿರಿ ಎಂದು ಅವರಿಗೆ ಸವಾಲು ಹಾಕಿದರು.
ಹೌಝ್ ಖಾಝಿಯಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, “ಹೊಸ ರಾಜಕೀಯ ವ್ಯವಸ್ಥೆಯನ್ನು ತಂದು, ಭ್ರಷ್ಟಾಚಾರವನ್ನು ಅಂತ್ಯಗೊಳಿಸುತ್ತೇನೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದರು. ಐದು ವರ್ಷಗಳಲ್ಲಿ ಯಮುನಾ ನದಿಯನ್ನು ಸ್ವಚ್ಛಗೊಳಿಸಿ, ಅದರಲ್ಲಿ ಮುಳುಗೇಳುತ್ತೇನೆ ಎಂದೂ ಅವರು ಭರವಸೆ ನೀಡಿದ್ದರು. ಆದರೆ, ಯಮುನಾ ನದಿ ಈಗಲೂ ಮಲಿನವಾಗಿದೆ. ಆ ನೀರಿನ್ನು ನೀವು ಕುಡಿಯಿರಿ; ನಾನು ನಿಮ್ಮನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡುತ್ತೇನೆ ಎಂದು ಅವರಿಗೆ ಹೇಳಲು ಬಯಸುತ್ತೇನೆ” ಎಂದು ವ್ಯಂಗ್ಯವಾಡಿದರು.
ಮನೀಶ್ ಸಿಸೋಡಿಯಾ, ಅತಿಶಿ, ಸಂಜಯ್ ಸಿಂಗ್, ರಾಘವ್ ಚಡ್ಡಾ, ಸತ್ಯೇಂದ್ರ ಜೈನ್ ಹಾಗೂ ಇನ್ನಿತರರು ಸೇರಿದಂತೆ 9 ಮಂದಿಯ ಕೋರ್ ತಂಡವನ್ನು ಟೀಕಿಸಿದ ಅವರು, ಅವರೆಲ್ಲ ಪ್ರಧಾನಿ ನರೇಂದ್ರ ಮೋದಿಯಂತೆಯೇ ಎಂದರು.