9 ರಾಜ್ಯಗಳಲ್ಲಿ ಅನಾವೃಷ್ಟಿ, 6 ರಾಜ್ಯಗಳಲ್ಲಿ ಅತಿವೃಷ್ಟಿ!
ಸಾಂದರ್ಭಿಕ ಚಿತ್ರ PC: PTI
ಹೊಸದಿಲ್ಲಿ: ಹಿಮಾಚಲ ಪ್ರದೇಶ, ಪಂಜಾಬ್, ಹರ್ಯಾಣ, ಒಡಿಶಾ ಹಾಗೂ ಬಿಹಾರ ಸೇರಿದಂತೆ ದೇಶದ ಒಂಬತ್ತು ರಾಜ್ಯಗಳಲ್ಲಿ ಕಳೆದ ಜೂನ್ ಮತ್ತು ಜುಲೈ ತಿಂಗಳ 20ರವರೆಗೆ ಮಳೆ ಅಭಾವ ಪರಿಸ್ಥಿತಿ ಕಾಣಿಸಿಕೊಂಡಿದೆ. ಈ ರಾಜ್ಯಗಳಲ್ಲಿ ಶೇಕಡ 20 ರಿಂದ 40ರವರೆಗೆ ಕೊರತೆ ಕಾಣಿಸಿಕೊಂಡಿದೆ. ಆದರೆ ದಕ್ಷಿಣ ಪರ್ಯಾಯದ್ವೀಪ ಪ್ರದೇಶ ಸೇರಿದಂತೆ ಆರು ರಾಜ್ಯಗಳಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದೆ.
ರಾಜ್ಯವಾರು ಅಂಕಿ ಅಂಶಗಳ ಪ್ರಕಾರ ಜಾರ್ಖಂಡ್ ನಲ್ಲಿ ಅತ್ಯಧಿಕ ಅಂದರೆ ಶೇಕಡ 49ರಷ್ಟು ಕಡಿಮೆ ಮಳೆ ಬಿದ್ದಿದೆ. ತಮಿಳುನಾಡಿನಲ್ಲಿ ಶೇಕಡ 83ರಷ್ಟು ಹೆಚ್ಚು ಮಳೆಯಾಗಿದೆ.
ಒಟ್ಟಾರೆಯಾಗಿ ದೇಶದಲ್ಲಿ ಸರಾಸರಿ ಶೇಕಡ 1ರಷ್ಟು ಕಡಿಮೆ ಮಳೆ ಬಿದ್ದಿದೆ. ವಾಯವ್ಯ ಭಾರತದಲ್ಲಿ ಶೇಕಡ 14, ಪೂರ್ವ ಮತ್ತು ಈಶಾನ್ಯ ರಾಜ್ಯಗಳಲ್ಲಿ ಶೇಕಡ 12ರಷ್ಟು ಕಡಿಮೆ ಮಳೆಯಾಗಿದೆ. ಒಡಿಶಾ ಕರಾವಳಿಯಲ್ಲಿ ವಾಯುಭಾರ ಕುಸಿತದಿಂದಾಗಿ ಕಳೆದ 24 ಗಂಟೆಗಳಲ್ಲಿ ಒಡಿಶಾ, ಛತ್ತೀಸ್ಗಢ, ಆಂಧ್ರಪ್ರದೇಶ ಮತ್ತಿತರ ರಾಜ್ಯಗಳಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಮಳೆ ಅಭಾವ ಪರಿಸ್ಥಿತಿ ಸುಧಾರಿಸುವ ಸಾಧ್ಯತೆ ಇದೆ.
ಪ್ರದೇಶವಾರು ವಿಶ್ಲೇಷಣೆ ನಡೆಸಿದರೆ, ಕೇಂದ್ರ ಭಾರತದಲ್ಲಿ ಮಳೆ ಅಭಾವ ಕಂಡುಬಂದಿಲ್ಲ. ಆದರೆ ದಕ್ಷಿಣ ಭಾರತದಲ್ಲಿ ವಾಡಿಕೆಗಿಂತ ಶೇಕಡ 26ರಷ್ಟು ಅಧಿಕ ಮಳೆಯಾಗಿದೆ. ಮುಂದಿನ ಕೆಲ ದಿನಗಳಲ್ಲಿ ಹೆಚ್ಚಿನ ಮಳೆಯಾಗುವ ನಿರೀಕ್ಷೆ ಇದ್ದರೂ ಒಟ್ಟಾರೆ ಪರಿಸ್ಥಿತಿ ಸುಧಾರಿಸುವ ಸಾಧ್ಯತೆ ಕಡಿಮೆ.
ಇಷ್ಟಾಗಿಯೂ ಮಳೆ ಅಭಾವ ಪರಿಸ್ಥಿತಿಯಿಂದ ದೇಶದ ಬಹುತೇಕ ಪ್ರದೇಶಗಳಲ್ಲಿ ಮುಂಗಾರು ಬೆಳೆಗಳ ಬಿತ್ತನೆ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿಲ್ಲ. ಜತೆಗೆ 150 ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಸುಧಾರಿಸಿರುವುದು ಕೂಡಾ ಇದಕ್ಕೆ ಕಾರಣ. ಒಟ್ಟಾರೆ ನೀರು ಸಂಗ್ರಹ ಪ್ರಮಾಣ ಒಟ್ಟು ಸಂಗ್ರಹ ಸಾಮರ್ಥ್ಯದ ಶೇಕಡ 20ರಷ್ಟು ಹೆಚ್ಚಿದೆ ಎಂದು ಕೇಂದ್ರ ಜಲ ಆಯೋಗ ಸ್ಪಷ್ಟಪಡಿಸಿದೆ.