"ಭಾರತೀಯ ಸಮಾಜಕ್ಕೆ ಸಾಮೂಹಿಕ ಮರೆವು ರೊಗ": ಕೋಲ್ಕತ ಅತ್ಯಾಚಾರ-ಕೊಲೆ ಬಗ್ಗೆ ಆಘಾತ ವ್ಯಕ್ತಪಡಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ದ್ರೌಪದಿ ಮುರ್ಮು | PTI
ಹೊಸದಿಲ್ಲಿ: ಕೋಲ್ಕತದ ಸರಕಾರಿ ಆಸ್ಪತ್ರೆಯೊಂದರಲ್ಲಿ ಈ ತಿಂಗಳ ಆದಿ ಭಾಗದಲ್ಲಿ ನಡೆದ ಕಲಿಕಾ ವೈದ್ಯೆಯೊಬ್ಬರ ಅಮಾನುಷ ಅತ್ಯಾಚಾರ ಮತ್ತು ಕೊಲೆ ಬಗ್ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ತೀವ್ರ ಆಘಾತ ಮತ್ತು ಆತಂಕ ವ್ಯಕ್ತಪಡಿಸಿದ್ದಾರೆ. ‘‘ಸಾಕಾಗಿ ಹೋಯಿತು’’ ಎಂದು ಹೇಳಿರುವ ಅವರು, ಮಹಿಳೆಯರ ವಿರುದ್ಧದ ಹಿಂಸೆಯ ಗಂಭೀರ ವಿಷಯದ ಕಡೆ ಗಮನ ಹರಿಸುವಂತೆ ಅವರಯ ಸಮಾಜವನ್ನು ಒತ್ತಾಯಿಸಿದ್ದಾರೆ.
ಕೋಲ್ಕತದ ಆರ್ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಹಾಲ್ನಲ್ಲಿ 31 ವರ್ಷದ ವೈದ್ಯೆಯ ಮೃತದೇಹ ಆಗಸ್ಟ್ 9ರಂದು ಪತ್ತೆಯಾಗಿತ್ತು. ಅತ್ಯಾಚಾರ-ಕೊಲೆಯ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗಳು ನಡೆಯುತ್ತಿರುವಂತೆಯೇ, ಬುಧವಾರ ಪಿಟಿಐಗೆ ನೀಡಿರುವ ಸಂದರ್ಶನವೊಂದರಲ್ಲಿ, ರಾಷ್ಟ್ರಪತಿ ಘಟನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನ್ಯಾಯಕ್ಕಾಗಿ ಆಗ್ರಹಿಸಿ ದೇಶಾದ್ಯಂತ ಪ್ರದರ್ಶನಗಳು ನಡೆಯುತ್ತಿರುವಾಗಲೂ, ಪಾತಕಿಗಳು ಒಡ್ಡಿರುವ ನಿರಂತರ ಬೆದರಿಕೆಯ ಬಗ್ಗೆ ರಾಷ್ಟ್ರಪತಿ ಕಳವಳ ವ್ಯಕ್ತಪಡಿಸಿದ್ದಾರೆ. ‘‘ಕೋಲ್ಕತದಲ್ಲಿ ವಿದ್ಯಾರ್ಥಿಗಳು, ವೈದ್ಯರು ಮತ್ತು ನಾಗರಿಕರು ಪ್ರತಿಭಟನೆ ನಡೆಸುತ್ತಿರುವಂತೆಯೇ, ಇತರೆಡೆ ಕ್ರಿಮಿನಲ್ಗಳು ತಮ್ಮ ಬೇಟೆಯನ್ನು ಮುಂದುವರಿಸಿದ್ದಾರೆ’’ ಎಂಬುದಾಗಿ ಅವರು ಆಕ್ರೋಶ ವ್ಯಕ್ತಪಡಿಸಿದರು.
‘‘ಪುತ್ರಿಯರು ಮತ್ತು ಸಹೋದರಿಯರನ್ನು ಇಂಥ ದೌರ್ಜನ್ಯಗಳಿಗೆ ಗುರಿಪಡಿಸುವುದನ್ನು ಯಾವುದೇ ನಾಗರಿಕ ಸಮಾಜ ಸಹಿಸಲು ಸಾಧ್ಯವಿಲ್ಲ’’ ಎಂದು ಹೇಳಿದ ಅವರು, ‘‘ಇಂಥ ಹೀನ ಕೃತ್ಯಗಳ ಮೂಲ ಕಾರಣಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸಮಾಜದಲ್ಲಿ ‘‘ಪ್ರಾಮಾಣಿಕ, ನಿಷ್ಪಕ್ಷ ಆತ್ಮಾವಲೋಕನ’’ದ ಅಗತ್ಯವಿದೆ ಎಂದು ರಾಷ್ಟ್ರಪತಿ ಹೇಳಿದರು.
ಮಹಿಳೆಯರನ್ನು ಕಡಿಮೆ ಪ್ರಭಾವಿಗಳು, ಕಡಿಮೆ ಸಮರ್ಥರು ಮತ್ತು ಕಡಿಮೆ ಬುದ್ಧಿವಂತರು ಎಂಬುದಾಗಿ ಕಾಣುವ ‘‘ಹೀನ ಮನಸ್ಥಿತಿ’’ಯ ವಿರುದ್ಧವೂ ದ್ರೌಪದಿ ಮುರ್ಮು ಕೆಂಡಗಾರಿದರು. 2012ರ ನಿರ್ಭಯಾ ಪ್ರಕರಣದ ಬಳಿಕ ಭಾರತೀಯ ಸಮಾಜವನ್ನು ‘‘ಸಾಮೂಹಿಕ ಮರೆವು ರೊಗ’’ ಕಾಡಿತು ಎಂದು ಅವರು ವಿಷಾದಿಸಿದರು. ಈ ಅವಧಿಯಲ್ಲಿ ನಡೆದ ಅಸಂಖ್ಯಾತ ಅತ್ಯಾಚಾರ ಪ್ರಕರಣಗಳು ಮರೆತುಹೋಗಿವೆ ಎಂದರು.
‘‘ಈ ಸಾಮೂಹಿಕ ಮರೆವು ಅಹಿತಕರ’’ ಎಂದು ಹೇಳಿದ ಅವರು, ಮಹಿಳೆಯರ ವಿರುದ್ಧದ ಹಿಂಸೆಯ ವಿರುದ್ಧ ತಿರುಗಿಬೀಳುವಂತೆ ಅವರ ದೇಶವನ್ನು ಒತ್ತಾಯಿಸಿದರು.