ಹೈದರಾಬಾದ್ನಲ್ಲಿ ಮಾದಕದ್ರವ್ಯ ತಯಾರಿಕಾ ಘಟಕ ಪತ್ತೆ; 6 ಮಂದಿ ಬಂಧನ
ಎಂಡಿಎಂಎ ಕಳ್ಳಸಾಗಣೆ ಜಾಲ ಭೇದಿಸಿದ ಕೇರಳ ಪೊಲೀಸರು
ಸಾಂದರ್ಭಿಕ ಚಿತ್ರ
ತ್ರಿಶೂರು: ಎಂಡಿಎಂಎ ಮಾದಕದ್ರವ್ಯ ಪತ್ತೆ ಪ್ರಕರಣದ ತನಿಖೆ ನಡೆಸಿದ ಕೇರಳದ ಒಲ್ಲೂರು ಠಾಣಾ ಪೊಲೀಸರು, ತೆಲಂಗಾಣದ ಹೈದರಾಬಾದ್ನಲ್ಲಿ ಕಾರ್ಯಾಚರಿಸುತ್ತಿದ್ದ ಸಿಂಥೆಟಿಕ್ ಡ್ರಗ್ಸ್ ತಯಾರಿಕಾ ಘಟಕವೊಂದನ್ನು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ ಆರು ಮಂದಿಯನ್ನು ಬಂಧಿಸಲಾಗಿದೆ.
ತೆಲಂಗಾಣದ ನಿವಾಸಿ ಕಾವುಕಟ್ಲ ಮಹೇಂದ್ರ ರೆಡ್ಡಿ ಈ ಜಾಲದ ಕಿಂಗ್ಪಿನ್ ಆಗಿದ್ದು, ದಕ್ಷಿಣ ಭಾರತದಲ್ಲಿ ಎಂಡಿಎಂಎ ಮಾದದ್ರವ್ಯ ವಿತರಣೆ ಜಾಲದಲ್ಲಿ ಮಧ್ಯವರ್ತಿಯಾಗಿ ಆತ ಕೆಲಸ ಮಾಡುತ್ತಿದ್ದ ಎಂದು ತನಿಖಾಧಿಕಾರಿ ಬೆನ್ನಿ ಜಾಕೋಬ್ ತಿಳಿಸಿದ್ದಾರೆ.
ಜುಲೈ 2ರಂದು ಒಲ್ಲೂರು ಪೊಲೀಸರು ಕಣ್ಣೂರು ನಿವಾಸಿ ಫಾಸಿಲ್ ಎಂಬಾತನ ಕಾರಿನಿಂದ ಸುಮಾರು 2 ಕೋಟಿ ರೂ. ಮೌಲ್ಯದ 2 ಕಿ.ಗ್ರಾಂ. ಎಂಡಿಎಂಎ ಮಾದಕದ್ರವ್ಯವನ್ನು ವಷಪಡಿಸಿಕೊಂಡಿದ್ದರು. ಅಲುವಾದಲ್ಲಿರುವ ಫಾಸಿಲ್ನ ಬಾಡಿಗೆ ಮನೆಯಿಂದಲೂ ಪೊಲೀಸರು ಎಂಡಿಎಂಎ ಅನ್ನು ಪತ್ತೆಹಚ್ಚಿದ್ದರು. ಗುಳಿಗೆಗಳು ಹಾಗೂ ಪುಡಿಯ ರೂದಲ್ಲಿದ್ದ ಈ ಮಾದಕದ್ರವ್ಯವು 2.4 ಕೆ.ಜಿ.ಯಷ್ಟಿತ್ತು.
ಆನಂತರ ತ್ರಿಶೂರು ನಗರ ಪೊಲೀಸ್ ವರಿಷ್ಠ ಆರ್.ಇಳಂಗೋ ಅವರು ಈ ಡ್ರಗ್ಸ್ಗಳ ಮೂಲವನ್ನು ಭೇದಿಸಲು ವಿಶೇಷ ತನಿಖಾ ತಂಡವೊಂದನ್ನು ರಚಿಸಿದರು. ಪ್ರಕರಣಕ್ಕೆ ಸಂಬಂಧಿಸಿ ಓಲ್ಲೂರು ಠಾಣಾಧಿಕಾರಿ ಬೆನ್ನಿ ಜಾಕೋಬ್ ನೇತೃತ್ವದ ತನಿಖಾ ತಂಡವು ಕೊಡಗಿನ ಗೋಣಿಕೊಪ್ದದಲ್ಲಿ ಕಣ್ಣೂರು ನಿವಾಸಿ ಬಿಜು ಎಂಬಾತನನ್ನು ಬಂಧಿಸಿದರು.ತರುವಾಯ ತನಿಖಾಧಿಕಾರಿಗಳು ಬೆಂಗಳೂರು ನಿವಾಸಿ ಸೋಮಯ್ಯ ಹಾಗೂ ಆಂಧ್ರಪ್ರದೇಶದ ನಿವಾಸಿ ರಾಮರಾವ್ ಅವರನ್ನು ಬೆಂಗಳೂರಿನಲ್ಲಿ ಬಂಧಿಸಿದರು. ಈ ಆರೋಪಿಗಳು ಕೇರಳದಲ್ಲಿ ವ್ಯಾಪಕವಾಗಿ ಕಳ್ಳಸಾಗಣೆಯಾಗುತ್ತಿರುವ ಐಎಂಡಿಎ ಸಿಂಥೆಟಿಕ್ ಡ್ರಗ್ಸ್ಗಳಿಗೆ ಪ್ರಮುಖ ಪೂರೈಕೆದಾರರೆಂದು ಪೊಲೀಸರಿಗೆ ಮನದಟ್ಟಾಯಿತು.
ತನಿಖೆ ಮುಂದುವರಿದಂತೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ನಿವಾಸಿ ಮಹೇಂದ್ರ ರೆಡ್ಡಿ ಈ ಜಾಲದಲ್ಲಿ ಪ್ರಮುಖ ಪಾತ್ರವಹಿಸಿರುವುದು ಬೆಳಕಿಗೆ ಬಂದಿತು. ಆತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಹೈದರಾಬಾದ್ನಲ್ಲಿ ಔಷಧಿ ತಯಾರಿಕಾ ಲ್ಯಾಬ್ನ ಸೋಗಿನಲ್ಲಿ ಮಾದಕದ್ರವ್ಯ ತಯಾರಿಕಾ ಘಟಕವೊಂದು ಕಾರ್ಯಾಚರಿಸುತ್ತಿರುವುದಾಗಿ ಆತ ಬಾಯ್ಬಿಟ್ಟಿದ್ದ. ಪ್ರಕರಣಕ್ಕೆ ಸಂಬಂಧಿಸಿ ಲ್ಯಾಬ್ನ ಮಾಲಕ ಇಶುಕಪಲ್ಲಿ ವೆಂಕಟ ನರಸಿಂಹರಾಜು ಅವರನ್ನು ನ್ಯಾಯಾಲಯದ ಅನುಮತಿ ಮೇರೆಗೆ ಬಂಧಿಸಲಾಗಿದೆ. ಹೈದರಾಬಾದ್ನ ಲ್ಯಾಬ್ನಿಂದ ವಶಪಡಿಸಿಕೊಳ್ಳಲಾದ ರಾಸಾಯನಿಕಗಳು ಮಾದಕದ್ರವ್ಯವೆಂಬುದನ್ನು ಫಾರೆನ್ಸಿಕ್ ತಜ್ಞರು ದೃಢಪಡಿಸಿದ್ದಾರೆ.