ಗುಜರಾತ್ | ಶೌಚಗುಂಡಿ ಸ್ವಚ್ಛಗೊಳಿಸುವಾಗ ವಿಷಾನಿಲ ಸೇವಿಸಿ ಇಬ್ಬರು ನೈರ್ಮಲ್ಯ ಕಾರ್ಮಿಕರ ಮೃತ್ಯು

ಸಾಂದರ್ಭಿಕ ಚಿತ್ರ
ಸುರೇಂದ್ರನಗರ: ಕೊಳಚೆ ಪಂಪಿಂಗ್ ಸ್ಟೇಷನ್ ಒಂದನ್ನು ಸ್ವಚ್ಛಗೊಳಿಸಲು ಅದರೊಳಗಿಳಿದಿದ್ದ ಇಬ್ಬರು ನೈರ್ಮಲ್ಯ ಕಾರ್ಮಿಕರು ವಿಷಾನಿಲ ಸೇವಿಸಿ ಮೃತಪಟ್ಟಿರುವ ಘಟನೆ ಗುಜರಾತ್ ನ ಸುರೇಂದ್ರನಗರ ಜಿಲ್ಲೆಯ ಪಟ್ಡಿ ಪಟ್ಟಣದಲ್ಲಿ ನಡೆದಿದೆ ಎಂದು ಮಂಗಳವಾರ ಪೊಲೀಸರು ತಿಳಿಸಿದ್ದಾರೆ.
ಈ ಘಟನೆ ಮಂಗಳವಾರ ಮಧ್ಯಾಹ್ನದ ಸುಮಾರಿಗೆ ನಡೆದಿದೆ ಎಂದು ಜಿಲ್ಲಾ ಉಪ ಪೊಲೀಸ್ ವರಿಷ್ಠಾಧಿಕಾರಿ ಜೆ.ಡಿ.ಪುರೋಹಿತ್ ಹೇಳಿದ್ದಾರೆ.
ಪಟ್ಡಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರ ಪ್ರಕಾರ, ಇಬ್ಬರು ನೈರ್ಮಲ್ಯ ಕಾರ್ಮಿಕರು ಪ್ರಜ್ಞಾಹೀನರಾದ ನಂತರ, ಕೂಡಲೇ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅವರು ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.
ಮೃತರನ್ನು ಪಟ್ಡಿ ಮಹಾನಗರ ಪಾಲಿಕೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಜಯೇಶ್ ಪಟಾಡಿಯ ಹಾಗೂ ಚಿರಾಗ್ ಪಟಾಡಿಯ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ರ ಪಟ್ಡಿ ಭೇಟಿ ನಿಗದಿಯಾಗಿದ್ದ ಒಂದು ದಿನ ಮುನ್ನ ಈ ಘಟನೆ ನಡೆದಿದೆ.