ದ್ವಾರಕ ಎಕ್ಸ್ ಪ್ರೆಸ್ ಹೈವೇ: ಮಂಜೂರಾದ ಮೊತ್ತದ 14 ಪಟ್ಟು ಅಧಿಕ ವೆಚ್ಚ!
Photo: NDtv
ಹೊಸದಿಲ್ಲಿ: ಕೇಂದ್ರ ಸರ್ಕಾರದ ಭಾರತ್ಮಾಲಾ ಪರಿಯೋಜನಾ ಹಂತ-1ರಲ್ಲಿ ನಿರ್ಮಾಣವಾದ ದ್ವಾರಕಾ ಎಕ್ಸ್ ಪ್ರೆಸ್ ಹೈವೆಯ ನಿರ್ಮಾಣ ವೆಚ್ಚ, 2017ರಲ್ಲಿ ಸರ್ಕಾರ ಮಂಜೂರು ಮಾಡಿದ್ದ ಮೊತ್ತದ 14 ಪಟ್ಟು ಅಧಿಕವಾಗಿರುವ ಅಂಶವನ್ನು ಕಂಟ್ರೋಲರ್ ಅಂಡ್ ಅಡಿಟರ್ ಜನರಲ್ ವರದಿ ಬೆಳಕಿಗೆ ತಂದಿದೆ.
ದೆಹಲಿ ಮತ್ತು ಗುರುಗ್ರಾಮ ನಡುವಿನ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ 14 ಲೇನ್ ಗಳ ರಾಷ್ಟ್ರೀಯ ಹೆದ್ದಾರಿಯನ್ನು ಪರ್ಯಾಯವಾಗಿ ಅಭಿವೃದ್ಧಿಪಡಿಸಲಾಗಿತ್ತು. ಸಿಸಿಇಎ ಅನುಮೋದಿಸಿದ ವೆಚ್ಚ ಪ್ರತಿ ಕಿಲೋಮೀಟರ್ ಗೆ 18.20 ಕೋಟಿ ರೂಪಾಯಿ ಆಗಿದ್ದರೆ, ವಾಸ್ತವವಾಗಿ ಆಗಿರುವ ವೆಚ್ಚ 250.77 ಕೋಟಿ ರೂಪಾಯಿ ಎಂದು ಸಿಎಜಿ ವರದಿ ಬಹಿರಂಗಪಡಿಸಿದೆ.
ಅಂತರರಾಜ್ಯ ಸಾರಿಗೆಯನ್ನು ಸುಗಮಗೊಳಿಸುವ ಸಲುವಾಗಿ ಈ ಹೆದ್ದಾರಿಯನ್ನು ಕನಿಷ್ಠ ಪ್ರವೇಶ ಮತ್ತು ನಿರ್ಗಮನ ವ್ಯವಸ್ಥೆಯೊಂದಿಗೆ ಎಂಟು ಲೇನ್ ಗಳ ಕಾರಿಡಾರ್ ಆಗಿ ನಿರ್ಮಿಸಲು ಉದ್ದೇಶಿಸಲಾಗಿತ್ತು. ಇದು ವೆಚ್ಚ ಹೆಚ್ಚಳಕ್ಕೆ ಕಾರಣ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಪ್ರತಿಕ್ರಿಯೆ ನೀಡಿದ್ದನ್ನು ವರದಿ ಉಲ್ಲೇಖಿಸಿದೆ.
ಆದರೆ ಪ್ರತಿದಿನ 55432 ಪ್ರಯಾಣಿಕ ವಾಹನಗಳು ಸಂಚರಿಸುವ ಮಾರ್ಗದಲ್ಲಿ ಎಂಟು ಲೇನ್ ಗಳ ಹೆದ್ದಾರಿ ಯೋಜನೆ/ ನಿರ್ಮಾಣಕ್ಕೆ ಯಾವುದೇ ಸಮರ್ಥನೆ ಇಲ್ಲ ಎಂದು ಸಿಎಜಿ ವರದಿ ಆಕ್ಷೇಪಿಸಿದೆ. ಸರಾಸರಿ ಪ್ರತಿದಿನ 2,32,959 ಪ್ರಯಾಣಿಕ ವಾಹನಗಳ ಸಂಚಾರಕ್ಕೆ ಕೇವಲ ಆರು ಲೇನ್ ಗಳನ್ನು ಮಾತ್ರ ನಿರ್ಮಿಸಬಹುದು ಎಂದು ಹೇಳಿದೆ.
34800 ಕಿಲೋಮೀಟರ್ ಗಳಿಗೆ ಸಿಸಿಇಎ 5.35 ಲಕ್ಷ ಕೋಟಿ ರೂಪಾಯಿಗಳನ್ನು ಅನುಮೋದಿಸಿದ್ದರೆ, ವಾಸ್ತವವಾಗಿ 26316 ಕಿಲೋಮೀಟರ್ ಉದ್ದದ ರಸ್ತೆ ನಿರ್ಮಾಣಕ್ಕೆ 8,46,588 ಕೋಟಿ ರೂಪಾಯಿ 8,46,588 ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ. ಅಂದರೆ ಪ್ರತಿ ಕಿಲೋಮೀಟರ್ ವೆಚ್ಚ 15.37 ಕೋಟಿಯ ಬದಲಾಗಿ 32.17 ಕೋಟಿ ಆಗಿದೆ ಎಂದು ಅಂಕಿ ಅಂಶ ನೀಡಿದೆ.
2022ರ ವೇಳೆಗೆ 34800 ಕಿಲೋಮೀಟರ್ ಹೆದ್ದಾರಿ ನಿರ್ಮಾಣವಾಗಬೇಕಿತ್ತು. ಆದರೆ 2023ರ ಮಾರ್ಚ್ 31ರವರೆಗೆ ಕೇವಲ 13,499 ಕಿಲೋಮೀಟರ್ ಪೂರ್ಣಗೊಂಡಿದೆ. ಅಂದರೆ ಮಂಜೂರಾದ ಒಟ್ಟು ಉದ್ದದ 38.79 ಶೇಕಡ ಮಾತ್ರ ಪೂರ್ಣಗೊಂಡಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.