ಇ-ಬೈಕ್ ಬ್ಯಾಟರಿಯಿಂದ ಬೆಂಕಿ: ನ್ಯೂಯಾರ್ಕ್ನಲ್ಲಿ ಭಾರತೀಯ ಪತ್ರಕರ್ತ ಮೃತ್ಯು
Photo: NDTV
ಹೊಸದಿಲ್ಲಿ: ನ್ಯೂಯಾರ್ಕ್ನ ಹರ್ಲೆಮ್ನಲ್ಲಿ ಲಿಥಿಯಂ-ಅಯಾನ್ ಬ್ಯಾಟರಿಯಿಂದ ಅಪಾರ್ಟ್ಮೆಂಟ್ನಲ್ಲಿ ಸಂಭವಿಸಿದ ಬೆಂಕಿ ಅಕಸ್ಮಿಕದಲ್ಲಿ ಮೃತಪಟ್ಟವರಲ್ಲಿ ಭಾರತದ ಪತ್ರಕರ್ತರೊಬ್ಬರು ಸೇರಿದ್ದಾರೆ. ಸೆಂಟ್ ನಿಕೋಲಸ್ ಪ್ಲೇಸ್ ಅಪಾರ್ಟ್ಮೆಂಟ್ ಕಟ್ಟಡದಲ್ಲಿ ನಡೆದ ದುರಂತದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಜನ ಕಿಟಕಿಯ ಮೂಲಕ ಹೊರಕ್ಕೆ ಹಾರಿದ್ದು, 17 ಮಂದಿ ತೀವ್ರವಾಗಿ ಗಾಯಗೊಂಡಿದ್ದರು.
ಮೃತಪಟ್ಟ ಯುವಕನನ್ನು 27 ವರ್ಷ ವಯಸ್ಸಿನ ಫಾಝಿಲ್ ಖಾನ್ ಎಂದು ಗುರುತಿಸಲಾಗಿದ್ದು, ನ್ಯೂಯಾರ್ಕ್ನಲ್ಲಿರುವ ಭಾರತೀಯ ದೂತಾವಾಸ, ಮೃತರ ಕುಟುಂಬ ಮತ್ತು ಸ್ನೇಹಿತರ ಜತೆ ನಿರಂತರ ಸಂಪರ್ಕದಲ್ಲಿರುವುದಾಗಿ ತಿಳಿಸಿದೆ.
"27 ವರ್ಷ ವಯಸ್ಸಿನ ಭಾರತೀಯ ವ್ಯಕ್ತಿ ಫೈಸಲ್ ಖಾನ್ ಅವರು ನ್ಯೂಯಾರ್ಕ್ನ ಹರ್ಲೆಮ್ ಅಪಾರ್ಟ್ಮೆಂಟ್ ಕಟ್ಟಡದಲ್ಲಿ ಸಂಭವಿಸಿದ ದುರದೃಷ್ಟಕರ ಅಗ್ನಿ ಆಕಸ್ಮಿಕದಲ್ಲಿ ಮೃತಪಟ್ಟಿರುವುದನ್ನು ತಿಳಿದು ಅತೀವ ದುಃಖವಾಗಿದೆ. ನ್ಯೂಯಾರ್ಕ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಫೈಸಲ್ ಕುಟುಂಬ ಹಾಗೂ ಸ್ನೇಹಿತರ ಜತೆ ನಿರಂತರ ಸಂಪರ್ಕದಲ್ಲಿದ್ದು, ಅವರ ಮೃತದೇಹವನ್ನು ಭಾರತಕ್ಕೆ ಸಾಗಿಸಲು ಬೇಕಾದ ಎಲ್ಲ ಅಗತ್ಯ ನೆರವನ್ನು ವಿಸ್ತರಿಸಲಾಗುವುದು" ಎಂದು ರಾಯಭಾರ ಕಚೇರಿಯ ಪ್ರಕಟಣೆ ಹೇಳಿದೆ.
ಕೊಲಂಬಿಯಾ ಜರ್ನಲಿಸಂ ಸ್ಕೂಲ್ನ ಹಳೆ ವಿದ್ಯಾರ್ಥಿಯಾಗಿರುವ ಫೈಝಲ್ ಖಾನ್, ಹೆಚಿಂಜೆರ್ ರಿಪೋರ್ಟ್ ಎಂಬ ಸುದ್ದಿಸಂಸ್ಥೆಯಲ್ಲಿ ಡಾಟಾ ಜರ್ನಲಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಶಿಕ್ಷಣದ ಅಸಮಾನತೆ ಮತ್ತು ಸಂಶೋಧನೆ ಎಂಬ ವಿಷಯದ ಬಗ್ಗೆ ವರದಿ ಮಾಡುವ ಲಾಭರಹಿತ ಸುದ್ದಿ ಸಂಸ್ಥೆ ಇದಾಗಿದೆ. ಇದು ಕೊಲಂಬಿಯಾ ವಿವಿಯ ಟೀಚರ್ಸ್ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ.