ಪೇಟಿಎಂ ಪೇಮೆಂಟ್ಸ್ ಬ್ಯಾಂಕಿನಿಂದ ಸಾಗರೋತ್ತರ ವಹಿವಾಟುಗಳ ವಿವರಗಳನ್ನು ಕೇಳಿದ ಈಡಿ
Photo: theprint.com
ಹೊಸದಿಲ್ಲಿ : ಜಾರಿ ನಿರ್ದೇಶನಾಲಯ (ಈಡಿ)ವು ತನ್ನ ಸಾಗರೋತ್ತರ ವಹಿವಾಟುಗಳ ವಿವರಗಳನ್ನು ಸಲ್ಲಿಸುವಂತೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ (ಪಿಪಿಬಿ)ಗೆ ಸೂಚಿಸಿದೆ ಎಂದು ಬಲ್ಲ ಮೂಲಗಳು ಬುಧವಾರ ತಿಳಿಸಿವೆ. ತನ್ನ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸುವಂತೆ ಆರ್ಬಿಐ ಕಳೆದ ತಿಂಗಳು ಪಿಪಿಬಿಗೆ ಆದೇಶಿಸಿದ್ದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.
ಆರ್ಬಿಐ ನಿರಂತರ ಮತ್ತು ಗಂಭೀರ ಮೇಲ್ವಿಚಾರಣೆ ಕಳವಳಗಳನ್ನು ಉಲ್ಲೇಖಿಸಿ ಮಾರ್ಚ್ನಿಂದ ತನ್ನ ಖಾತೆಗಳಲ್ಲಿ ಅಥವಾ ಜನಪ್ರಿಯ ವ್ಯಾಲೆಟ್ನಲ್ಲಿ ಹೊಸದಾಗಿ ಠೇವಣಿಗಳ ಸ್ವೀಕಾರವನ್ನು ನಿಲ್ಲಿಸುವಂತೆ ಒನ್ 97 ಕಮ್ಯುನಿಕೇಷನ್ಸ್ನ ಸಹಸಂಸ್ಥೆ ಪಿಪಿಬಿಗೆ ಆದೇಶಿಸಿತ್ತು.
ವಿದೇಶಿ ವಿನಿಮಯ ನಿಯಮಗಳನ್ನು ಉಲ್ಲಂಘಿಸಿರುವ ಶಂಕೆಯಲ್ಲಿ ಈಡಿ ಒನ್ 97 ಕುರಿತು ತನಿಖೆಯನ್ನು ಆರಂಭಿಸಿದೆ ಎಂದು ಈ ತಿಂಗಳ ಆರಂಭದಲ್ಲಿ ಸುದ್ದಿಸಂಸ್ಥೆ ರಾಯ್ಟರ್ಸ್ ವರದಿ ಮಾಡಿತ್ತು. ಆದರೆ ಇಂತಹ ಯಾವುದೇ ಉಲ್ಲಂಘನೆ ಆರೋಪಗಳನ್ನು ಕಂಪನಿಯು ನಿರಾಕರಿಸಿತ್ತು.
ವಿಚಾರಣೆಯು ವಿದೇಶಿ ವಿನಿಮಯ ನಿಯಮಗಳಿಗೆ ಸಂಬಂಧಿಸಿದೆ ಮತ್ತು ವಿಚಾರಣೆಯು ಮುಖ್ಯವಾಗಿ ಪಿಪಿಬಿಯ ಹಿಂದಿನ ವಹಿವಾಟುಗಳ ಕುರಿತಾಗಿದೆ ಎಂದು ಕಂಪನಿಗೆ ನಿಕಟ ಮೂಲವು ತಿಳಿಸಿದೆ.
ಪಿಪಿಬಿ ಮುಖ್ಯವಾಗಿ ಸ್ಥಳೀಯ ವ್ಯವಹಾರವಾಗಿದ್ದರೂ ಅದು ಆರ್ಬಿಐನಿಂದ ‘ಎಡಿ ಕೆಟಗರಿ II’ ಪರವಾನಿಗೆಯನ್ನು ಹೊಂದಿದೆ ಮತ್ತು ಇದು ನಿರ್ದಿಷ್ಟ ಉದ್ದೇಶಗಳಿಗಾಗಿ ವಿದೇಶಿ ವಿನಿಮಯದಲ್ಲಿ ವ್ಯವಹರಿಸಲು ಅದಕ್ಕೆ ಅಧಿಕಾರವನ್ನು ನೀಡಿದೆ.
ಈಡಿಪಿಪಿಬಿಯನ್ನು ತಲುಪುವ ಮುನ್ನ ಆರ್ಬಿಐನಿಂದ ಮಾಹಿತಿಯನ್ನು ಕೋರಿತ್ತು ಎಂದು ಸರಕಾರಿ ಮೂಲವೊಂದು ತಿಳಿಸಿದೆ.
ನಾನ್-ಎಕ್ಸಿಕ್ಯೂಟಿವ್ ಚೇರಮನ್ ವಿಜಯ ಶೇಖರ ಶರ್ಮಾ ಅವರು ಕಾಲಾವಕಾಶವನ್ನು ಕೋರಿ ಆರ್ಬಿಐ ಅಧಿಕಾರಿಗಳು ಮತ್ತು ವಿತ್ತಸಚಿವರನ್ನು ಭೇಟಿಯಾಗಿದ್ದರಾದರೂ ಪೇಟಿಎಮ್ ಪೇಮೆಂಟ್ ಬ್ಯಾಂಕ್ಗೆ ಸಂಬಂಧಿಸಿದಂತೆ ಆರ್ಬಿಐ ನಿರ್ಧಾರವನ್ನು ಪುನರ್ಪರಿಶೀಲಿಸುವುದಿಲ್ಲ ಎಂದು ಅದರ ಗವರ್ನರ್ ಶಕ್ತಿಕಾಂತ ದಾಸ್ ಅವರು ಸೋಮವಾರ ಸ್ಪಷ್ಟಪಡಿಸಿದ್ದಾರೆ.
ಕಳೆದ ತಿಂಗಳು ಆರ್ಬಿಐ ಆದೇಶ ಹೊರಬಿದ್ದ ಬಳಿಕ ಒನ್ 97 ಶೇರುಗಳ ಬೆಲೆ ಸುಮಾರು ಶೇ.55ರಷ್ಟು ಕುಸಿದಿದ್ದು,ಮಾರುಕಟ್ಟೆ ಮೌಲ್ಯದಲ್ಲಿ 3.2 ಶತಕೋಟಿ ಡಾಲರ್ ಗಳ ನಷ್ಟವನ್ನು ಅನುಭವಿಸಿದೆ. ಬುಧವಾರ ಕಂಪನಿಯ ಶೇರುಗಳು ಶೇ.10ರಷ್ಟು ಇಳಿಕೆಯನ್ನು ದಾಖಲಿಸಿವೆ.