ಮತದಾರರ ಪಟ್ಟಿ ಹಗರಣವನ್ನು ಚುನಾವಣಾ ಆಯೋಗ ಬಚ್ಚಿಡುತ್ತಿದೆ: ಚುನಾವಣಾ ಆಯೋಗದ ವಿರುದ್ಧ ಮತ್ತೆ ಟಿಎಂಸಿ ಆರೋಪ

Photo: PTI
ಹೊಸದಿಲ್ಲಿ: ಮತದಾರರ ಪಟ್ಟಿಯ ಕುರಿತು ಚುನಾವಣಾ ಆಯೋಗ ನೀಡಿದ್ದ ವಿವರಣೆಗಳಿಗೆ ಮಂಗಳವಾರ ತಿರುಗೇಟು ನೀಡಿರುವ ತೃಣಮೂಲ ಕಾಂಗ್ರೆಸ್ ಸಂಸದ ಸಾಕೇತ್ ಗೋಖಲೆ, ಚುನಾವಣಾ ಆಯೋಗವು ಮತದಾರರ ಪಟ್ಟಿಯ ಹಗರಣವನ್ನು ಒಪ್ಪಿಕೊಳ್ಳುವ ಬದಲು, ಅದನ್ನು ಬಚ್ಚಿಡಲು ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, “ನಕಲಿ ಮತದಾರರ ಗುರುತಿನ ಚೀಟಿ ಅಕ್ರಮದಲ್ಲಿ ಚುನಾವಣಾ ಆಯೋಗ ತನ್ನ ಪ್ರಮಾದವನ್ನು ಒಪ್ಪಿಕೊಳ್ಳುದವ ಬದಲು, ನಿರ್ಲಜ್ಜವಾಗಿ ಅಕ್ರಮಗಳನ್ನು ತಿರಸ್ಕರಿಸಲು ಯತ್ನಿಸುತ್ತಿದೆ” ಎಂದು ವಾಗ್ದಾಳಿ ನಡೆಸಿದ್ದಾರೆ.
ಚುನಾವಣಾ ನೋಂದಣಿ ಅಧಿಕಾರಿಗಳಿಗಾಗಿ ಚುನಾವಣಾ ಆಯೋಗ ಹೊರ ತಂದಿರುವ ಕೈಪಿಡಿಯ ಕೆಲ ಭಾಗಗಳನ್ನು ಉಲ್ಲೇಖಿಸಿರುವ ಸಾಕೇತ್ ಗೋಖಲೆ, ಚುನಾವಣಾ ಆಯೋಗದ ಸಮಜಾಯಿಷಿ ಸುಳ್ಳಾಗಿದ್ದು, ಅದು ತನ್ನದೇ ನಿಯಮಾವಳಿಗಳು ಮತ್ತು ಮಾರ್ಗಸೂಚಿಗಳಿಗೆ ವ್ಯತಿರಿಕ್ತವಾಗಿದೆ ಎಂದು ಆರೋಪಿಸಿದ್ದಾರೆ.
ಚುನಾವಣಾ ಆಯೋಗದ ವಿವರಣೆಗೆ ಹಂತಹಂತವಾಗಿ ತಿರುಗೇಟು ನೀಡಿರುವ ಅವರು, ಮತದಾರರ ಗುರುತಿನ ಚೀಟಿಯ ನಕಲಿನ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ.
ಇದಕ್ಕೂ ಮುನ್ನ, ಕೆಲ ರಾಜ್ಯಗಳು ಒಂದೇ ಬಗೆಯ ಅಕ್ಷರಸಂಖ್ಯಾ ಸರಣಿಗಳನ್ನು ಬಳಸಿರುವುದರಿಂದ, ಹಲವು ಮತದಾರರಿಗೆ ಒಂದೇ ಸಂಖ್ಯೆಯನ್ನು ಹೊಂದಿರುವ ಗುರುತಿನ ಚೀಟಿಗಳನ್ನು ವಿತರಿಸಲಾಗಿದೆ ಎಂದು ಚುನಾವಣಾ ಆಯೋಗ ಸ್ಪಷ್ಟನೆ ನೀಡಿತ್ತು.
ಆದರೆ, ಈ ಸ್ಪಷ್ಟನೆಯನ್ನು ಪ್ರಶ್ನಿಸಿರುವ ಸಾಕೇತ್ ಗೋಖಲೆ, ಕಾರ್ಯನಿರತ ವಿಶಿಷ್ಟ ಸರಣಿ ಸಂಖ್ಯೆ (Functional Unique Serial Number) ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ಪ್ರತ್ಯೇಕವಾಗಿದ್ದು, ಎರಡು ಪ್ರತ್ಯೇಕ ವಿಧಾನಸಭಾ ಕ್ಷೇತ್ರಗಳಲ್ಲಿನ ಮತದಾರರು ಒಂದೇ ರಾಜ್ಯದಲ್ಲಿದ್ದರೂ, ಮತದಾರರ ಗುರುತಿನ ಚೀಟಿಯಲ್ಲಿನ ಮೊದಲ ಮೂರು ಅಕ್ಷರಗಳನ್ನು ಹೊಂದಿರುವ ಒಂದೇ ಬಗೆಯ ಮತದಾರರ ಚೀಟಿಯನ್ನು ಪಡೆಯಲು ಸಾಧ್ಯವಿಲ್ಲ ಎಂದು ಚುನಾವಣಾ ಆಯೋಗದ ಕೈಪಿಡಿಯನ್ನು ಉಲ್ಲೇಖಿಸಿ ತಿರುಗೇಟು ನೀಡಿದ್ದಾರೆ.
ಮತದಾರರ ಗುರುತಿನ ಚೀಟಿಯ ನಕಲಿನ ಕುರಿತು ಟಿಎಂಸಿ ಸಂಸದರಾದ ಡೆರೆಕ್ ಓ’ಬ್ರಿಯಾನ್, ಕೀರ್ತಿ ಆಝಾದ್ ಹಾಗೂ ಸಾಗರಿಕ ಘೋಶ್ ಕೂಡಾ ಧ್ವನಿ ಎತ್ತಿದ್ದಾರೆ. ಫೆಬ್ರವರಿ 27ರಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ವಿಷಯವನ್ನು ಮೊದಲ ಬಾರಿಗೆ ಪ್ರಸ್ತಾಪಿಸಿದ್ದರು.