ಈಕ್ವೆಡಾರ್: ಕ್ರಿಮಿನಲ್ ಗಳ ಒತ್ತೆಸೆರೆಯಲ್ಲಿ ಜೈಲು ಸಿಬ್ಬಂದಿಗಳು

ಸಾಂದರ್ಭಿಕ ಚಿತ್ರ | Photo: NDTV
ಕ್ವಿಟೊ: ಇಕ್ವೆಡಾರ್ನಲ್ಲಿ ಹಿಂಸಾಚಾರ ಮತ್ತು ದೊಂಬಿ ಪ್ರಕರಣ ಉಲ್ಬಣಿಸಿದ್ದು ಮಾದಕ ವಸ್ತುಗಳ ವ್ಯವಹಾರ ಜಾಲದ ತಂಡಗಳು 130ಕ್ಕೂ ಅಧಿಕ ಜೈಲುಸಿಬಂದಿಗಳನ್ನು ಒತ್ತೆಸೆರೆಯಲ್ಲಿ ಇರಿಸಿಕೊಂಡಿರುವುದಾಗಿ ವರದಿಯಾಗಿದೆ.
ನವೆಂಬರ್ ನಲ್ಲಿ ಅಧಿಕಾರಕ್ಕೆ ಬಂದ ಡೇನಿಯಲ್ ನೊಬೊವ ಮಾದಕವಸ್ತು ಕಳ್ಳಸಾಗಣೆ ಜಾಲವನ್ನು ಮಟ್ಟಹಾಕುವ ಪಣ ತೊಟ್ಟಿದ್ದು ಮಂಗಳವಾರ 22 ಗ್ಯಾಂಗ್ ಗಳನ್ನು ಭಯೋತ್ಪಾದಕ ಸಂಘಟನೆಗಳೆಂದು ಘೋಷಿಸಿದ್ದರು. `ದೇಶದಲ್ಲಿ ಸುಮಾರು 20,000 ಕ್ರಿಮಿನಲ್ ಗಳು ಸಕ್ರಿಯವಾಗಿದ್ದಾರೆಂದು ಅಂದಾಜಿಸಲಾಗಿದೆ. ನಾವು ಯುದ್ಧದಲ್ಲಿದ್ದೇವೆ ಮತ್ತು ಈ ಭಯೋತ್ಪಾದಕ ಗುಂಪುಗಳ ಎದುರು ಕೈಕಟ್ಟಿ ಕೂರಲು ಸಾಧ್ಯವಿಲ್ಲ. ಕ್ರಿಮಿನಲ್ ಗ್ಯಾಂಗ್ ಗಳ ಒತ್ತೆಸೆರೆಯಲ್ಲಿ ಇರುವವರನ್ನು ಸುರಕ್ಷಿತವಾಗಿ ಕರೆತರಲು ಎಲ್ಲಾ ಪ್ರಯತ್ನಗಳನ್ನೂ ನಡೆಸಲಾಗುತ್ತಿದೆ. ಸಶಸ್ತ್ರ ಪಡೆ ರಕ್ಷಣಾ ಕಾರ್ಯಾಚರಣೆಯ ನೇತೃತ್ವ ವಹಿಸಿದೆ' ಎಂದು ನೊಬೊವ ಹೇಳಿದ್ದಾರೆ.
ಈ ಮಧ್ಯೆ, ಕುಖ್ಯಾತ ಕ್ರಿಮಿನಲ್ ಗಳಿಗಾಗಿ ಗರಿಷ್ಟ ಭದ್ರತೆಯ ಪ್ರತ್ಯೇಕ ಜೈಲುಗಳನ್ನು ಸ್ಥಾಪಿಸಲು ಮತ್ತು ಜೈಲುಗಳಲ್ಲಿರುವ ವಿದೇಶಿ ಕೈದಿಗಳನ್ನು ಆಯಾ ದೇಶಗಳಿಗೆ ಗಡೀಪಾರು ಮಾಡಲು ಸರಕಾರ ನಿರ್ಧರಿಸಿದೆ. ಈಕ್ವೆಡಾರ್ನ ಜೈಲುಗಳಲ್ಲಿರುವ ಕೈದಿಗಳಲ್ಲಿ 90% ರಷ್ಟು ಮಂದಿ ವಿದೇಶೀಯರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಈಕ್ವೆಡಾರ್ ನಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಖಂಡಿಸಿರುವ ಅಮೆರಿಕ, ತಕ್ಷಣ ಶಸ್ತ್ರಾಸ್ತ್ರ ಸೇರಿದಂತೆ ಹೆಚ್ಚುವರಿ ನೆರವನ್ನು ಒದಗಿಸುವುದಾಗಿ ಘೋಷಿಸಿದೆ.