4,200 ಅಕ್ರಮ ಭಾರತೀಯ ವಲಸಿಗರ ಬಗ್ಗೆ ಈಡಿ ತನಿಖೆ!

PC :indiatoday.in
ಹೊಸದಿಲ್ಲಿ: ಕಳೆದ ಮೂರು ವರ್ಷಗಳಲ್ಲಿ ಸರಿಯಾದ ದಾಖಲೆಗಳನ್ನು ಸಲ್ಲಿಸದೆ ಅಮೆರಿಕಕ್ಕೆ ವಲಸೆ ಹೋಗಿರುವ ಕನಿಷ್ಠ 4,200 ಭಾರತೀಯರ ಬಗ್ಗೆ ಅನುಷ್ಠಾನ ನಿರ್ದೇಶನಾಲಯ (ಈಡಿ)ವು ತನಿಖೆ ನಡೆಸುತ್ತಿದೆ ಎಂದು ‘ಇಂಡಿಯನ್ ಎಕ್ಸ್ಪ್ರೆಸ್’ ಶುಕ್ರವಾರ ವರದಿ ಮಾಡಿದೆ.
ಶಿಕ್ಷಣ ವೀಸಾದಲ್ಲಿ ಕೆನಡಕ್ಕೆ ಹೋಗಿ ಅಲ್ಲಿಂದ ಅಮೆರಿಕಕ್ಕೆ ಅಕ್ರಮವಾಗಿ ವಲಸೆ ಹೋಗುವ ಭಾರತೀಯರಿಗೆ ಸಂಬಂಧಿಸಿದ ಸಾವಿರಾರು ಸಂಶಯಾಸ್ಪದ ವ್ಯವಹಾರಗಳನ್ನು ತಾನು ಪತ್ತೆಹಚ್ಚಿರುವುದಾಗಿ ಅನುಷ್ಠಾನ ನಿರ್ದೇಶನಾಲಯ ತಿಳಿಸಿದೆ. ಅಗತ್ಯ ದಾಖಲೆಗಳಿಲ್ಲದೆ ಭಾರತೀಯರನ್ನು ಅಮೆರಿಕಕ್ಕೆ ಕಳುಹಿಸುವ ಕೆಲಸದಲ್ಲಿ ಶಾಮೀಲಾಗಿದೆ ಎನ್ನಲಾದ ಗುಜರಾತ್ ಮತ್ತು ಪಂಜಾಬ್ನ ಏಜಂಟರ ಬಗ್ಗೆ ತನಿಖೆ ನಡೆಸಿದಾಗ ಈ ಪ್ರವೃತ್ತಿ ಬೆಳಕಿಗೆ ಬಂದಿದೆ ಎಂದು ಅದು ಹೇಳಿದೆ.
ಭಾರತೀಯ ಕುಟುಂಬವೊಂದರ ನಾಲ್ವರು ಸದಸ್ಯರು ಮೃತಪಟ್ಟ ಘಟನೆಗೆ ಸಂಬಂಧಿಸಿ ಗುಜರಾತ್ ಪೊಲೀಸರು 2023ರ ಜನವರಿಯಲ್ಲಿ ದಾಖಲಿಸಿದ ಪ್ರಕರಣದ ಆಧಾರದಲ್ಲಿ ನಿರ್ದೇಶನಾಲಯವು ತನ್ನ ತನಿಖೆ ಆರಂಭಿಸಿದೆ. 2022ರಲ್ಲಿ ಭಾರತೀಯರು ಕೆನಡದಿಂದ ಅಮೆರಿಕಕ್ಕೆ ಗಡಿ ದಾಟಲು ಪ್ರಯತ್ನಿಸುತ್ತಿದ್ದಾಗ ಹಿಮದಲ್ಲಿ ಮರಗಟ್ಟಿ ಮೃತಪಟ್ಟಿದ್ದರು.