ಕೆನಡಾದಲ್ಲಿ ಬೃಹತ್ ಚಿನ್ನ ಕಳ್ಳತನ ಪ್ರಕರಣ | ಶಂಕಿತ ಆರೋಪಿ ಸಿಮ್ರನ್ ಪ್ರೀತ್ ಪನೇಸರ್ ನಿವಾಸದ ಮೇಲೆ ಈಡಿ ದಾಳಿ

PC : newindianexpress.com
ಚಂಡೀಗಢ: ಕೆನಡಾದಲ್ಲಿ ನಡೆದಿದ್ದ 122 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಬೃಹತ್ ಚಿನ್ನ ಕಳ್ಳತನ ಪ್ರಕರಣದಲ್ಲಿ ಕೆನಡಾ ಪ್ರಾಧಿಕಾರಗಳಿಗೆ ಬೇಕಿರುವ ಶಂಕಿತ ಆರೋಪಿ, 32 ವರ್ಷದ ಸಿಮ್ರನ್ ಪ್ರೀತ್ ಪನೇಸರ್ ನಿವಾಸದ ಮೇಲೆ ಇಂದು ಜಾರಿ ನಿರ್ದೇಶನಾಲಯ(ಈಡಿ) ದಾಳಿ ನಡೆಸಿ, ಶೋಧ ಕಾರ್ಯಾಚರಣೆ ಕೈಗೊಂಡಿತು.
ಎಪ್ರಿಲ್ 2023ರಲ್ಲಿ ಟೊರೊಂಟೊದ ಪಿಯರ್ಸನ್ ಅಂತಾರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದ್ದ ಚಿನ್ನ ಕಳ್ಳತನ ಪ್ರಕರಣದಲ್ಲಿನ ಒಂಬತ್ತು ಶಂಕಿತ ಆರೋಪಿಗಳ ಪೈಕಿ ಪನೇಸರ್ ಕೂಡಾ ಒಬ್ಬನಾಗಿದ್ದಾನೆ.
ಮಾಜಿ ಮಿಸ್ ಇಂಡಿಯಾ ಉಗಾಂಡ, ಗಾಯಕಿ ಹಾಗೂ ನಟಿಯಾದ ತನ್ನ ಪತ್ನಿ ಪ್ರೀತಿ ಪನೇಸರ್ ಸೇರಿದಂತೆ ತನ್ನ ಕುಟುಂಬದ ಸದಸ್ಯರೊಂದಿಗೆ ಸಿಮ್ರನ್ ಪ್ರೀತ್ ಸಿಂಗ್ ವಾಸಿಸುತ್ತಿರುವ ಪಂಜಾಬ್ ನ ಮೊಹಾಲಿಯ ಸೆಕ್ಟರ್ 70ರಲ್ಲಿರುವ ಅವರ ಬಾಡಿಗೆ ಅಪಾರ್ಟ್ ಮೆಂಟ್ ಮೇಲೆ ಜಾರಿ ನಿರ್ದೇಶನಾಲಯ(ಈಡಿ)ದ ಅಧಿಕಾರಿಗಳು ದಾಳಿ ನಡೆಸಿದರು.
ಶುಕ್ರವಾರ ಬೆಳಗ್ಗೆ ಸುಮಾರು 7 ಗಂಟೆಗೆ ಪನೇಸರ್ ನಿವಾಸಕ್ಕೆ ಆಗಮಿಸಿದ ಜಾರಿ ನಿರ್ದೇಶನಾಲಯ(ಈಡಿ) ತಂಡವು, ಅಕ್ರಮ ಹಣ ವರ್ಗಾವಣೆ ಕಾಯ್ದೆಯ ಸೆಕ್ಷನ್ 2 (1) (ra) ಅಡಿ ಪ್ರಕರಣ ದಾಖಲಿಸಿಕೊಂಡ ನಂತರ ತನಿಖೆ ಪ್ರಾರಂಭಿಸಿತು.
ಎಪ್ರಿಲ್ 2023ರಲ್ಲಿ ಏರ್ ಕೆನಡಾದ ಮಾಜಿ ಮೇಲ್ವಿಚಾರಕ ಸಿಮ್ರನ್ ಪ್ರೀತ್ ಪನೇಸರ್ ಸೇರಿದಂತೆ ಒಂಬತ್ತು ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದ ಪೀಲ್ ಪ್ರಾಂತೀಯ ಪೊಲೀಸರು, ಪನೇಸರ್ ವಿರುದ್ಧ ಬಂಧನದ ವಾರೆಂಟ್ ಜಾರಿಗೊಳಿಸಿದ್ದರು.
ಟೊರೊಂಟೊದ ಪಿಯರ್ಸನ್ ವಿಮಾನ ನಿಲ್ದಾಣದ ಉಗ್ರಾಣದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪನೇಸರ್ ಹಾಗೂ ಸಹ ಆರೋಪಿ ಪರಂಪಾಲ್ ಸಿಧು ಆಗ ಬ್ರಾಂಪ್ಟನ್ ನಲ್ಲಿ ವಾಸಿಸುತ್ತಿದ್ದರು. ಪಿಯರ್ಸನ್ ವಿಮಾನ ನಿಲ್ದಾಣದ ಉಗ್ರಾಣದಲ್ಲಿ ನಡೆದಿದ್ದ ಸುಮಾರು 400 ಕೆಜಿ ತೂಕದ 6,600 ಶುದ್ಧ ಚಿನ್ನದ ಗಟ್ಟಿಗಳನ್ನು ಹೊಂದಿದ್ದ ಸರಕು ಕಳ್ಳತನದಲ್ಲಿ ಅವರಿಬ್ಬರೂ ಭಾಗಿಯಾಗಿದ್ದಾರೆ ಎಂದು ಶಂಕಿಸಲಾಗಿದೆ.