ಕಳೆದ 10 ವರ್ಷಗಳಲ್ಲಿ ರಾಜಕೀಯ ನಾಯಕರ ವಿರುದ್ಧದ ಈಡಿ ಪ್ರಕರಣಗಳಲ್ಲಿ ಕೇವಲ ಎರಡರಲ್ಲಿ ಶಿಕ್ಷೆ: ಕೇಂದ್ರ

Photo Credit | PTI
ಹೊಸದಿಲ್ಲಿ: ಜಾರಿ ನಿರ್ದೇಶನಾಲಯ(ಈಡಿ)ವು ಕಳೆದ 10 ವರ್ಷಗಳಲ್ಲಿ ಸಂಸದರು, ಶಾಸಕರು ಮತ್ತು ಸ್ಥಳೀಯ ಸಂಸ್ಥೆಗಳ ಸದಸ್ಯರ ವಿರುದ್ಧ ದಾಖಲಿಸಿದ 193 ಪ್ರಕರಣಗಳ ಪೈಕಿ ಎರಡರಲ್ಲಿ ಶಿಕ್ಷೆಯಾಗಿದೆ ಎಂದು ಕೇಂದ್ರ ಸರಕಾರವು ಸಂಸತ್ತಿನಲ್ಲಿ ತಿಳಿಸಿದೆ.
2016-17ರಲ್ಲಿ ಒಂದು ಪ್ರಕರಣದಲ್ಲಿ ಮತ್ತು 2019-20ರಲ್ಲಿ ಇನ್ನೊಂದು ಪ್ರಕರಣದಲ್ಲಿ ಶಿಕ್ಷೆಯಾಗಿದೆ.
ಮಂಗಳವಾರ ರಾಜ್ಯಸಭೆಯಲ್ಲಿ ಸಿಪಿಎಂ ಸಂಸದ ಎ.ಎ.ರಹೀಂ ಅವರು ಕೇಳಿದ ಪ್ರಶ್ನೆಗಳಿಗೆ ನೀಡಿದ ಉತ್ತರದಲ್ಲಿ ವಿತ್ತ ಸಚಿವಾಲಯವು ಈ ಮಾಹಿತಿಗಳನ್ನು ಒದಗಿಸಿದೆ.
ಕಳೆದ 10 ವರ್ಷಗಳಲ್ಲಿ ರಾಜಕೀಯ ನಾಯಕರ ವಿರುದ್ಧ ದಾಖಲಾಗಿರುವ ಈಡಿ ಪ್ರಕರಣಗಳು, ಅವರ ಪಕ್ಷಗಳು ಮತ್ತು ರಾಜ್ಯಗಳ ವಿವರಗಳ ಜೊತೆಗೆ ಪ್ರಕರಣಗಳು ದಾಖಲಾದ ವರ್ಷ ಮತ್ತು ಇಂತಹ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದವರ ಮತ್ತು ಖುಲಾಸೆಗೊಂಡವರ ಸಂಖ್ಯೆಗಳನ್ನು ತಿಳಿದುಕೊಳ್ಳಲು ರಹೀಂ ಬಯಸಿದ್ದರು.
ಇತ್ತೀಚಿನ ವರ್ಷಗಳಲ್ಲಿ ಪ್ರತಿಪಕ್ಷ ನಾಯಕರ ವಿರುದ್ಧ ದಾಖಲಾದ ಈಡಿ ಪ್ರಕರಣಗಳಲ್ಲಿ ಹೆಚ್ಚಳವಾಗಿದೆಯೇ ಹಾಗೂ ಈಡಿಯ ತನಿಖೆಗಳಲ್ಲಿ ಪಾರದರ್ಶಕತೆ ಮತ್ತು ದಕ್ಷತೆಯನ್ನು ಹೆಚ್ಚಿಸಲು ಸರಕಾರವು ಯಾವುದೇ ಸುಧಾರಣಾ ಕ್ರಮಗಳನ್ನು ತೆಗೆದುಕೊಂಡಿದೆಯೇ ಎಂದೂ ಅವರು ಪ್ರಶ್ನಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಸಹಾಯಕ ವಿತ್ತ ಸಚಿವ ಪಂಕಜ್ ಚೌಧರಿಯವರು, ರಾಜಕೀಯ ನಾಯಕರ ವಿರುದ್ಧ ಈಡಿ ದಾಖಲಿಸಿದ ಪ್ರಕರಣಗಳ ಕುರಿತು ರಾಜ್ಯವಾರು ಅಥವಾ ಪಕ್ಷವಾರು ಮಾಹಿತಿ ಲಭ್ಯವಿಲ್ಲ ಎಂದು ತಿಳಿಸಿದರು.
ಆದರೆ, ಸಚಿವರು ಒದಗಿಸಿರುವ ದತ್ತಾಂಶಗಳು ಪ್ರಧಾನಿ ನರೇಂದ್ರ ಮೋದಿ ಸರಕಾರದ ಎರಡನೇ ಅವಧಿಯಾದ 2019 ಮತ್ತು 2024ರ ನಡುವೆ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದನ್ನು ತೋರಿಸಿವೆ. ಈ ಅವಧಿಯಲ್ಲಿ ರಾಜಕಾರಣಿಗಳ ವಿರುದ್ಧ ಒಟ್ಟು 138 ಪ್ರಕರಣಗಳು ದಾಖಲಾಗಿವೆ.
2022-23ರಲ್ಲಿ ಅತ್ಯಂತ ಹೆಚ್ಚು, 32 ಪ್ರಕರಣಗಳು ದಾಖಲಾಗಿವೆ.
ಎಪ್ರಿಲ್ 2024 ಮತ್ತು ಫೆಬ್ರುವರಿ 2025ರ ನಡುವೆ ರಾಜಕೀಯ ನಾಯಕರ ವಿರುದ್ಧ 13 ಪ್ರಕರಣಗಳು ದಾಖಲಾಗಿರುವುದನ್ನು ದತ್ತಾಂಶಗಳು ತೋರಿಸಿವೆ. ಮೋದಿ ಸರಕಾರದ ಮೂರನೇ ಅವಧಿಯು ಕಳೆದ ವರ್ಷದ ಜೂನ್ ನಲ್ಲಿ ಆರಂಭಗೊಂಡಿತ್ತು.
ಇತ್ತೀಚಿನ ವರ್ಷಗಳಲಿ ಪ್ರತಿಪಕ್ಷ ನಾಯಕರ ವಿರುದ್ಧ ದಾಖಲಾಗಿರುವ ಈಡಿ ಪ್ರಕರಣಗಳಲ್ಲಿ ಏರಿಕೆಯಾಗಿದೆಯೇ ಎಂಬ ಬಗ್ಗೆ ಯಾವುದೇ ಮಾಹಿತಿಯು ಲಭ್ಯವಿಲ್ಲ ಎಂದು ಚೌಧರಿ ತಿಳಿಸಿದರು.
ಈಡಿ ವಿಶ್ವಾಸಾರ್ಹ ಪುರಾವೆಗಳ ಆಧಾರದಲ್ಲಿ ಪ್ರಕರಣಗಳ ತನಿಖೆಯನ್ನು ಕೈಗೆತ್ತಿಕೊಳ್ಳುತ್ತದೆ ಮತ್ತು ರಾಜಕೀಯ ನಂಟು, ಧರ್ಮ ಅಥವಾ ಇತರ ವಿಷಯಗಳ ಆಧಾರದಲ್ಲಿ ಪ್ರಕರಣಗಳನ್ನು ದಾಖಲಿಸುವುದಿಲ್ಲ. ಈಡಿಯ ಕ್ರಮಗಳು ಯಾವಾಗಲೂ ನ್ಯಾಯಾಂಗ ಪರಿಶೀಲನೆಗೆ ಮುಕ್ತವಾಗಿವೆ ಎಂದೂ ಚೌಧರಿ ತಿಳಿಸಿದರು.