ಅಕ್ರಮ ಹಣ ವರ್ಗಾವಣೆ ಪ್ರಕರಣ: ಅಹಮದಾಬಾದ್ ಜೈಲಿನಿಂದ ಪತ್ರಕರ್ತ ಮಹೇಶ್ ಲಾಂಗಾರನ್ನು ಬಂಧಿಸಿದ ಈಡಿ

ಮಹೇಶ್ ಲಾಂಗಾ (Photo credit: Facebook)
ಅಹಮದಾಬಾದ್: ವಂಚನೆ ಹಾಗೂ ಕ್ರಿಮಿನಲ್ ವಿಶ್ವಾಸ ದ್ರೋಹ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಪತ್ರಕರ್ತ ಮಹೇಶ್ ಲಾಂಗಾರನ್ನು ಮಂಗಳವಾರ ಜಾರಿ ನಿರ್ದೇಶನಾಲಯ (ED) ಬಂಧಿಸಿದೆ.
ಇತರ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಹಮದಾಬಾದ್ ನ ಸಾಬರಮತಿ ಜೈಲಿನಲ್ಲಿರುವ ಮಹೇಶ್ ಲಾಂಗಾರನ್ನು ಬಂಧಿಸಿದ ಈಡಿ, ಅವರನ್ನು ಅಹಮದಾಬಾದ್ ನ್ಯಾಯಾಲಯವೊಂದರ ಎದುರು ಹಾಜರು ಪಡಿಸಿತು. ನಂತರ ಫೆಬ್ರವರಿ 28ವರೆಗೆ ಅವರನ್ನು ಈಡಿ ವಶಕ್ಕೆ ಒಪ್ಪಿಸಲಾಯಿತು.
ಅಹಮದಾಬಾದ್ ನಲ್ಲಿ The Hindu ಸುದ್ದಿ ಸಂಸ್ಥೆಯ ಪತ್ರಕರ್ತರಾಗಿ ಕೆಲಸ ಮಾಡುತ್ತಿರುವ ಮಹೇಶ್ ಲಂಗಾರ ವಿರುದ್ಧ ಒಟ್ಟು ಏಳು ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಐದು ಪ್ರಕರಣಗಳನ್ನು ಗುಜರಾತ್ ಪೊಲೀಸರು ದಾಖಲಿಸಿದ್ದರೆ, ಎರಡು ಪ್ರಕರಣಗಳನ್ನು ಜಾರಿ ನಿರ್ದೇಶನಾಲಯ ದಾಖಲಿಸಿದೆ.
ಉದ್ಯಮಿಯೊಬ್ಬರಿಗೆ 28.68 ಲಕ್ಷ ರೂ. ವಂಚಿಸಲಾಗಿದೆ ಎಂಬ ಆರೋಪದ ಮೇಲೆ ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ ಅಪರಾಧ ವಿಭಾಗದ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್ಐಆರ್ ಅನ್ನು ಆಧರಿಸಿ ಜಾರಿ ನಿರ್ದೇಶನಾಲಯ ಈ ಹೊಸ ಪ್ರಕರಣ ದಾಖಲಿಸಿಕೊಂಡಿದೆ ಎಂದು The Indian Express ಸುದ್ದಿ ಸಂಸ್ಥೆ ವರದಿ ಮಾಡಿದೆ.
ತನಿಖೆಯ ಸಂದರ್ಭದಲ್ಲಿ ಲಾಂಗಾ ವಿರುದ್ಧ ವಂಚನೆಯೆಸಗಿ, ಆರ್ಥಿಕ ನಷ್ಟವನ್ನುಂಟು ಮಾಡಿದ ಆರೋಪದ ಮೇಲೆ ಅಹಮದಾಬಾದ್ ನ ಸ್ಯಾಟಲೈಟ್ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿರುವುದು ಕಂಡು ಬಂದಿದೆ. ಈ ಪ್ರಕರಣವು ಭೂ ದಲ್ಲಾಳಿಯೊಬ್ಬರಿಂದ 40 ಲಕ್ಷ ರೂ. ಸುಲಿಗೆ ಮಾಡಿದ ಆರೋಪಕ್ಕೆ ಸಂಬಂಧಿಸಿದ್ದಾಗಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ.
ಲಂಗಾರನ್ನು ಮೊದಲ ಬಾರಿ ಜಿಎಸ್ಟಿ ವಂಚನೆ ಎಸಗಿದ ಆರೋಪದ ಮೇಲೆ ಅಕ್ಟೋಬರ್ 7ರಂದು ಅಹಮದಾಬಾದ್ ನ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದರು. ಧ್ರುವಿ ಎಂಟರ್ ಪ್ರೈಸಸ್ ಎಂಬ ಕಂಪನಿಯು ವಂಚಕ ಮಾರ್ಗದಲ್ಲಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಪಡೆಯಲು ಒಂದೇ ಪ್ಯಾನ್ ಕಾರ್ಡ್ ಬಳಸಿ ಏಳು ಸಂಸ್ಥೆಗಳನ್ನು ಹುಟ್ಟು ಹಾಕಿತ್ತು ಎಂದು ಪೊಲೀಸರು ಆರೋಪಿಸಿದ್ದರು. ಎಫ್ಐಆರ್ ನಲ್ಲಿ ನಮೂದಿಸಲಾಗಿರುವ ಕಂಪನಿಗಳ ಪೈಕಿ ಡಿಎ ಎಂಟರ್ ಪ್ರೈಸ್ ಕೂಡಾ ಸೇರಿದೆ.
ಗುಜರಾತ್ ಸಮುದ್ರ ಸಾರಿಗೆ ಮಂಡಳಿಗೆ ಸಂಬಂಧಿಸಿದ ಗೋಪ್ಯ ದಾಖಲೆಗಳನ್ನು ಹೊಂದಿದ್ದಾರೆ ಎಂಬ ಆರೋಪದ ಮೇಲೆ ಅಕ್ಟೋಬರ್ 22ರಂದು ಲಾಂಗಾರ ವಿರುದ್ಧ ಪೊಲೀಸರು ಎರಡನೆ ಪ್ರಕರಣ ದಾಖಲಿಸಿಕೊಂಡಿದ್ದರು. ಲಾಂಗಾರನ್ನು ಪ್ರಥಮ ಪ್ರಕರಣದಲ್ಲಿ ಬಂಧಿಸಿದ ವೇಳೆ ಅವರಿಂದ ಈ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಪೊಲೀಸರ ಕ್ರಮವನ್ನು ಖಂಡಿಸಿದ್ದ ಪತ್ರಿಕಾ ಸಂಘಟನೆಗಳು, ಸರಕಾರದ ಗೋಪ್ಯ ದಾಖಲೆಗಳನ್ನು ಹೊಂದಿದ್ದ ಆರೋಪದ ಮೇಲೆ ಲಾಂಗಾರ ವಿರುದ್ಧ ದಾಖಲಿಸಿಕೊಂಡಿರುವ ಪ್ರಕರಣವನ್ನು ಕೈಬಿಡಬೇಕು ಎಂದು ಪೊಲೀಸರನ್ನು ಆಗ್ರಹಿಸಿದ್ದವು.
ಇದರ ಬೆನ್ನಿಗೇ, ಅಹಮದಾಬಾದ್ ನ ಉದ್ಯಮಿಯೊಬ್ಬರಿಗೆ ವಂಚಿಸಿದ ಆರೋಪದ ಮೇಲೆ ಅಕ್ಟೋಬರ್ 29ರಂದು ಲಾಂಗಾರ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿತ್ತು. ಅದೇ ದಿನ ಲಾಂಗಾ ಹಾಗೂ ಇನ್ನಿತರರ ವಿರುದ್ಧ ತಾನು ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಅಹಮದಾಬಾದ್ ನ ಜಾರಿ ನಿರ್ದೇಶನಾಲಯದ ವಲಯ ಕಚೇರಿ ಪ್ರಕಟಿಸಿತ್ತು.