ಅದಾನಿ ವಿರುದ್ಧದ ಆರೋಪಗಳ ಬಗ್ಗೆ ತನಿಖೆ ಮಾಡುವುದು ಈಡಿ, ಸಿಬಿಐ, ಸೆಬಿಗಳ ಹೊಣೆ : ಕಾಂಗ್ರೆಸ್
PC : ED \ CBI
ಹೊಸದಿಲ್ಲಿ : ರಾಜ್ಯಗಳ ವಿದ್ಯುತ್ ವಿತರಣಾ ಕಂಪೆನಿ (ಡಿಸ್ಕಾಮ್)ಗಳು ಅದಾನಿ ಗ್ರೀನ್ ಕಂಪೆನಿಯಿಂದ ಹೆಚ್ಚಿನ ಬೆಲೆಗೆ ವಿದ್ಯುತ್ ಖರೀದಿಸುವಂತೆ ನೋಡಿಕೊಳ್ಳಲು ಸರಕಾರಿ ಅಧಿಕಾರಿಗಳಿಗೆ ಸಾವಿರಾರು ಕೋಟಿ ರೂಪಾಯಿ ಲಂಚ ನೀಡಿರುವ ಆರೋಪಗಳನ್ನು ಎದುರಿಸುತ್ತಿರುವ ಕೈಗಾರಿಕೋದ್ಯಮಿ ಗೌತಮ್ ಅದಾನಿ ಮತ್ತು ಸಹೋದರನ ಮಗ ಸಾಗರ್ ಅದಾನಿ ವಿರುದ್ಧ ತನಿಖೆಯಾಗಬೇಕೆಂಬ ತನ್ನ ಬೇಡಿಕೆಯನ್ನು ಕಾಂಗ್ರೆಸ್ ಬುಧವಾರ ಪುನರುಚ್ಚರಿಸಿದೆ.
ಭಾರತದಲ್ಲಿ ಸರಕಾರಿ ಅಧಿಕಾರಿಗಳಿಗೆ ಲಂಚ ಪಾವತಿ ಮತ್ತು ಅಮೆರಿಕದ ಹೂಡಿಕೆದಾರರಿಗೆ ಲಂಚ ಪಾವತಿಯ ವಿಷಯದಲ್ಲಿ ಸುಳ್ಳು ಹೇಳಿರುವ ಮೊಕದ್ದಮೆಗಳಿಗೆ ಸಂಬಂಧಿಸಿ ಅಮೆರಿಕದ ಪ್ರಾಸಿಕ್ಯೂಟರ್ಗಳು ಇತ್ತೀಚೆಗೆ ನ್ಯೂಯಾರ್ಕ್ ನ್ಯಾಯಾಲಯವೊಂದರಲ್ಲಿ ಗೌತಮ್ ಅದಾನಿ, ಸಾಗರ್ ಅದಾನಿ ಮತ್ತು ಇತರ ಆರು ಮಂದಿಯ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ ಬಳಿಕ ಕಾಂಗ್ರೆಸ್ ತನ್ನ ವಾಗ್ದಾಳಿಯನ್ನು ತೀವ್ರಗೊಳಿಸಿದೆ.
ಅದಾನಿ ಗುಂಪಿಗೆ ಸೇರಿರುವ ಅದಾನಿ ಗ್ರೀನ್ ಎನರ್ಜಿ ಕಂಪೆನಿಯು ನೀಡಿರುವ ಸ್ಪಷ್ಟೀಕರಣವು ‘‘ಆರೋಪಗಳನ್ನು ನಿರಾಕರಿಸುವ ಮೂಲಕ ಹಾನಿಯನ್ನು ಕಡಿಮೆಗೊಳಿಸುವ ತಂತ್ರಗಾರಿಕೆಯ ಭಾಗವಾಗಿದೆ’’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಬರೆದಿದ್ದಾರೆ.
‘‘ ‘ಮೊದಾನಿ (ಮೋದಿ + ಅದಾನಿ) ಪರಿಸರ ವ್ಯವಸ್ಥೆಯು ಇಂದು ಬೆಳಗ್ಗೆ ದೊಡ್ಡ ಕಾನೂನು ಅಂಶಗಳತ್ತ ಬೆಟ್ಟು ಮಾಡಿರುವುದರಲ್ಲಿ ಆಶ್ಚರ್ಯವೇನಿಲ್ಲ. ಬೇರೆ ದೇಶಗಳಲ್ಲಿ ಗಂಭೀರ ಕ್ರಮಗಳನ್ನು ಎದುರಿಸುತ್ತಿರುವ ಮೊದಾನಿ ಪರಿಸರ ವ್ಯವಸ್ಥೆಯು, ನಿರಾಕರಣೆ ಮೂಲಕ ಹಾನಿ ನಿಯಂತ್ರಣ ಮಾಡಲು ಯತ್ನಿಸುತ್ತಿದೆ. ಈ ಹಾಸ್ಯಾಸ್ಪದ ಪ್ರಯತ್ನವು ಅಮೆರಿಕದ ಕಾನೂನು ಅನುಷ್ಠಾನ ಸಂಸ್ಥೆಗಳು ಮಾಡಿರುವ ಆರೊಪಗಳ ಗಂಭೀರತೆಯನ್ನು ದುರ್ಬಲಗೊಳಿಸಲಾರದು’’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹೇಳಿದರು.
ಬುಧವಾರ ಬೆಳಗ್ಗೆ, ಅದಾನಿ ಸಮೂಹವನ್ನು ಆವರಿಸಿರುವ ವಿವಾದಗಳ ಕೇಂದ್ರ ಬಿಂದುವಾಗಿರುವ ಅದಾನಿ ಗ್ರೀನ್ ಎನರ್ಜಿ ಕಂಪೆನಿಯು ಶೇರು ವಿನಿಮಯ ಕೇಂದ್ರಗಳಿಗೆ ಅರ್ಜಿಯೊಂದನ್ನು ಸಲ್ಲಿಸಿ, ಅಮೆರಿಕದ ವಿದೇಶಿ ಭ್ರಷ್ಟಾಚಾರ ಚಟುವಟಿಕೆಗಳ ಕಾಯ್ದೆಯನ್ನು ಉಲ್ಲಂಘಿಸಿರುವ ಆರೋಪವನ್ನು ಗೌತಮ್ ಅದಾನಿ ಮತ್ತು ಸಾಗರ್ ಅದಾನಿ ವಿರುದ್ಧ ಹೊರಿಸಲಾಗಿಲ್ಲ ಎಂಬ ಸ್ಪಷ್ಟೀಕರಣವನ್ನು ನೀಡಿದೆ. ಅವರ ವಿರುದ್ಧದ ಆರೋಪಗಳು ಹಣಕಾಸು ದಂಡಗಳಿಗೆ ಸಂಬಂಧಿಸಿವೆಯೇ ಹೊರತು, ಲಂಚಕ್ಕೆ ಸಂಬಂಧಿಸಿದ್ದಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಆದರೆ, ಅಮೆರಿಕದ ಕಾನೂನು ಇಲಾಖೆಯ ದೋಷಾರೋಪಣಾ ಪಟ್ಟಿಯಲ್ಲಿ ನಮೂದಿಸಲಾಗಿರುವ ಆರೋಪಗಳತ್ತ ಜೈರಾಮ್ ರಮೇಶ್ ಬೆಟ್ಟು ಮಾಡಿದರು. ರಾಜ್ಯಗಳ ವಿದ್ಯುತ್ ವಿತರಣಾ ಕಂಪೆನಿಗಳು ಅದಾನಿ ಗ್ರೀನ್ ಕಂಪೆನಿ ಉತ್ಪಾದಿಸುವ ಸೌರ ವಿದ್ಯುತ್ತನ್ನು ಖರೀದಿಸುವುದಕ್ಕಾಗಿ ಸರಕಾರಿ ಅಧಿಕಾರಿಗಳಿಗೆ 2,029 ಕೋಟಿ ರೂ. ಲಂಚ ನೀಡುವ ಸಂಚೊಂದನ್ನು ಅದಾನಿಗಳು ರೂಪಿಸಿದ್ದಾರೆ ಎಂಬ ಆರೋಪವನ್ನು ದೋಷಾರೋಪಣ ಪಟ್ಟಿಯಲ್ಲಿ ನಮೂದಿಸಲಾಗಿದೆ ಎಂದು ಅವರು ಹೇಳಿದರು.
► ಇದು ಸಾಂವಿಧಾನಿಕ ಸಂಸ್ಥೆಗಳ ಸತ್ವಪರೀಕ್ಷೆಯ ಕಾಲ
ಭಾರತದ ಸಾಂವಿಧಾನಿಕ ಸಂಸ್ಥೆಗಳಾದ ಅನುಷ್ಠಾನ ನಿರ್ದೇಶನಾಲಯ (ಈಡಿ), ಕೆಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಮತ್ತು ಭಾರತೀಯ ಶೇರು ವಿನಿಮಯ ಮಂಡಳಿ (ಸೆಬಿ)ಗಳು ದೇಶಕ್ಕಾಗಿ ಬದ್ಧತೆಯನ್ನು ಹೊಂದಿವೆ, ಹಾಗಾಗಿ, ಅವುಗಳು ಈ ವಿಷಯದ ಬಗ್ಗೆ ತನಿಖೆ ನಡೆಸಬೇಕು ಎಂದು ಜೈರಾಮ್ ರಮೇಶ್ ಹೇಳಿದರು. ‘‘ಬದಲಿಗೆ, ಅವುಗಳು ಭ್ರಷ್ಟ ರಾಜಕೀಯ-ಉದ್ಯಮ ದುಷ್ಟಕೂಟದ ಕೈಯಲ್ಲಿರುವ ಸಲಕರಣೆಗಳಂತೆ ವರ್ತಿಸಬಾರದು’’ ಎಂದು ಅವರು ನುಡಿದರು.
‘‘ಇದು ನಮ್ಮ ಸಾಂವಿಧಾನಿಕ ಸಂಸ್ಥೆಗಳು ಮತ್ತು ಆ ಸಂಸ್ಥೆಗಳಲ್ಲಿರುವ ಭಾರತೀಯರ ಸತ್ವಪರೀಕ್ಷೆಯ ಕಾಲವಾಗಿದೆ. ಈ ಕ್ಷಣಗಳನ್ನು ಇತಿಹಾಸವು ಎಂದೂ ಮರೆಯುವುದೂ ಇಲ್ಲ, ಕ್ಷಮಿಸುವುದೂ ಇಲ್ಲ. ಈ ವಿಷಯವನ್ನು ಸಂಸತ್ ನಲ್ಲಿ ಪ್ರಸ್ತಾಪಿಸುವ ಮತ್ತು ಜನರ ಮುಂದೆ ಇಡುವ ನಮ್ಮ ಕರ್ತವ್ಯವನ್ನು ಮಾಡುವುದನ್ನು ನಾವು ಮುಂದುವರಿಸುತ್ತೇವೆ’’ ಎಂದು ಅವರು ಹೇಳಿದರು.
► ಅದಾನಿಯನ್ನು ಜೈಲಿಗೆ ಹಾಕಿ: ರಾಹುಲ್ ಗಾಂಧಿ
ಭಾರತದಲ್ಲಿ ಸರಕಾರಿ ಅಧಿಕಾರಿಗಳಿಗೆ ಲಂಚ ನೀಡಿರುವುದಕ್ಕಾಗಿ ಅಮೆರಿಕದಲ್ಲಿ ನ್ಯಾಯಾಲಯದ ವಿಚಾರಣೆ ಎದುರಿಸುತ್ತಿರುವ ಅದಾನಿ ಸಮೂಹದ ಮುಖ್ಯಸ್ಥ ಗೌತಮ್ ಅದಾನಿಯನ್ನು ಬಂಧಿಸಿ ಜೈಲಿಗೆ ಕಳುಹಿಸಬೇಕು ಎಂದು ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಬುಧವಾರ ಹೇಳಿದ್ದಾರೆ.
ಅಮೆರಿಕದ ವಿದೇಶಿ ಭ್ರಷ್ಟಾಚಾರ ಚಟುವಟಿಕೆಗಳ ಕಾಯ್ದೆಯನ್ನು ಉಲ್ಲಂಘಿಸಿರುವ ಆರೋಪವನ್ನು ಗೌತಮ್ ಅದಾನಿ ಮತ್ತು ಸಾಗರ್ ಅದಾನಿ ವಿರುದ್ಧ ಹೊರಿಸಲಾಗಿಲ್ಲ ಎಂಬ ಸ್ಪಷ್ಟೀಕರಣವನ್ನು ಬುಧವಾರ ಬೆಳಗ್ಗೆ ಅದಾನಿ ಗ್ರೀನ್ ಎನರ್ಜಿ ಕಂಪೆನಿಯು ಶೇರು ವಿನಿಮಯ ಕೇಂದ್ರಗಳಿಗೆ ಸಲ್ಲಿಸಿದ ಅರ್ಜಿಯಲ್ಲಿ ಹೇಳಿದ ಬಳಿಕ, ರಾಹುಲ್ ಗಾಂಧಿ ಈ ಪ್ರತಿಕ್ರಿಯೆ ನೀಡಿದ್ದಾರೆ.
ಉದ್ಯಮಿ ಗೌತಮ್ ಅದಾನಿ ತನ್ನ ವಿರುದ್ಧದ ಆರೋಪಗಳನ್ನು ಸಹಜವಾಗಿಯೇ ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದ ಕಾಂಗ್ರೆಸ್ ನಾಯಕ, ಅವರನ್ನು ಬಂಧಿಸಬೇಕು ಎಂದು ಹೇಳಿದರು.
‘‘ದೇಶದಲ್ಲಿ ಸಣ್ಣಪುಟ್ಟ ಆರೋಪಗಳಲ್ಲಿ ನೂರಾರು ಜನರನ್ನು ಬಂಧಿಸಿ ಜೈಲಿಗೆ ಅಟ್ಟಲಾಗುತ್ತಿರುವಾಗ, ಅದಾನಿ ಯಾಕೆ ಜೈಲಿನಲ್ಲಿ ಇಲ್ಲ?’’ ಎಂದು ಲೋಕಸಭೆಯ ಪ್ರತಿಪಕ್ಷ ನಾಯಕ ಪ್ರಶ್ನಿಸಿದರು.
ಅವರು ಬುಧವಾರ ಸಂಸತ್ನ ಹೊರಗಡೆ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು.
‘‘ಅದಾನಿಗಳು ತಮ್ಮ ವಿರುದ್ಧದ ಆರೋಪಗಳನ್ನು ಒಪ್ಪಿಕೊಳ್ಳುತ್ತಾರೆ ಎಂಬುದಾಗಿ ನೀವು ಭಾವಿಸಿದ್ದೀರಾ? ನೀವು ಯಾವ ಲೋಕದಲ್ಲಿ ವಾಸಿಸುತ್ತಿದ್ದೀರಿ? ಖಂಡಿವಾಗಿಯೂ, ಅವರು ತನ್ನ ವಿರುದ್ಧದ ಆರೋಪಗಳನ್ನು ನಿರಾಕರಿಸುತ್ತಾರೆ’’ ಎಂದು ಅವರು ಹೇಳಿದರು. ತನ್ನ ವಿರುದ್ಧದ ಆರೋಪಗಳನ್ನು ಅದಾನಿ ಗುಂಪು ನಿರಾಕರಿಸಿರುವ ಬಗ್ಗೆ ಕೇಳಲಾದ ಪ್ರಶ್ನೆಯೊಂದಕ್ಕೆ ಅವರು ಈ ಪ್ರತಿಕ್ರಿಯೆ ನೀಡಿದರು.