AAP ಸಂಸದ ಸಂಜೀವ್ ಅರೋರಾ ನಿವಾಸದ ಮೇಲೆ ಈಡಿ ದಾಳಿ
ಸಂಜೀವ್ ಅರೋರಾ (Photo: ANI)
ಪಂಜಾಬ್: ಭೂ ವಂಚನೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಎಪಿ ರಾಜ್ಯಸಭಾ ಸಂಸದ ಸಂಜೀವ್ ಅರೋರಾ ನಿವಾಸದ ಮೇಲೆ ಈಡಿ ಅಧಿಕಾರಿಗಳು ಸೋಮವಾರ ದಾಳಿ ನಡೆಸಿದ್ದಾರೆ.
ಭೂ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ನ ಜಲಂಧರ್ ಜಿಲ್ಲೆಯಲ್ಲಿ ಅರೋರಾಗೆ ಸಂಬಂಧಿಸಿದ ಹಲವು ಸ್ಥಳಗಳಲ್ಲಿ ದಾಳಿಗಳನ್ನು ನಡೆಸಲಾಗಿದೆ. ಅರೋರಾ ತನ್ನ ಕಂಪನಿಗೆ ವಂಚನೆಯ ರೀತಿಯಲ್ಲಿ ಭೂಮಿಯನ್ನು ವರ್ಗಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಆಮ್ ಆದ್ಮಿ ಪಕ್ಷದ ನಾಯಕ, ದಿಲ್ಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಸಂಜೀವ್ ಅರೋರಾ ಅವರ ನಿವಾಸದ ಮೇಲಿನ ಈಡಿ ದಾಳಿಯು ಪಂಜಾಬ್ ನಲ್ಲಿ ಪಕ್ಷವನ್ನು ಒಡೆಯುವ ಪ್ರಯತ್ನದ ಭಾಗವಾಗಿದೆ ಎಂದು ಹೇಳಿದ್ದಾರೆ.
ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸಂಸದ ಸಂಜೀವ್ ಅರೋರಾ ನಿವಾಸದ ಮೇಲೆ ಈಡಿ ದಾಳಿ ನಡೆಸಿದೆ. ಕಳೆದ ಎರಡು ವರ್ಷಗಳಲ್ಲಿ ಅವರು ಅರವಿಂದ್ ಕೇಜ್ರಿವಾಲ್ ನಿವಾಸ, ನನ್ನ ನಿವಾಸ, ಸಂಜಯ್ ಸಿಂಗ್ ನಿವಾಸ, ಸತ್ಯೇಂದ್ರ ಜೈನ್ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಆದರೆ ಅವರಿಗೆ ಏನೂ ಸಿಕ್ಕಿಲ್ಲ. ಈಗಲೂ ಮೋದಿಜಿಯ ಏಜೆನ್ಸಿಗಳು ಒಂದರ ಹಿಂದೆ ಒಂದರಂತೆ ಸುಳ್ಳು ಕೇಸ್ ಹಾಕುವುದರಲ್ಲಿ ನಿರತವಾಗಿವೆ. ಆದರೆ, ಎಎಪಿ ಸದಸ್ಯರು ತಮ್ಮನ್ನು ತಾವು ಮಾರಾಟ ಮಾಡಿಕೊಳ್ಳುವುದಿಲ್ಲ ಮತ್ತು ಹೆದರುವುದಿಲ್ಲ ಎಂದು ಹೇಳಿದ್ದಾರೆ.