ಈಡಿಯಿಂದ ಕೇರಳ ಕಾಂಗ್ರೆಸ್ನ ಕೆ.ಕೆ. ಅಬ್ರಹಾಂ ಬಂಧನ
ಕೇರಳ: ಸಹಕಾರಿ ಬ್ಯಾಂಕ್ ವಂಚನೆ ಪ್ರಕರಣ
Photo: Facebook
ಕೊಚ್ಚಿ: ವಯನಾಡ್ ಜಿಲ್ಲೆಯ ಸೇವಾ ಸಹಕಾರಿ ಬ್ಯಾಂಕೊಂದರ ಸಾಲ ಹಗರಣಕ್ಕೆ ಸಂಬಂಧಿಸಿ ಕೇರಳ ಪ್ರದೇಶ ಕಾಂಗ್ರೆಸ್ ಕಮಿಟಿ (ಕೆಪಿಸಿಸಿ)ಯ ಮಾಜಿ ಪ್ರಧಾನ ಕಾರ್ಯದರ್ಶಿ ಕೆ.ಕೆ. ಅಬ್ರಹಾಂ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ.
ಪುಲ್ಪಲ್ಲಿ ಸೇವಾ ಸಹಕಾರಿ ಬ್ಯಾಂಕ್ನಲ್ಲಿ ಅಬ್ರಹಾಂ ಅವರು ಅಧ್ಯಕ್ಷರಾಗಿದ್ದಾಗ ಈ ಅಕ್ರಮ ನಡೆದಿತ್ತು. ಅಬ್ರಹಾಂ ಅವರು ಸಂಜೀವನ್ ಎಂಬವರೊಂದಿಗೆ ಸೇರಿಕೊಂಡು ಬ್ಯಾಂಕ್ನ 5 ಕೋ.ರೂ.ಗೂ ಅಧಿಕ ಹಣವನ್ನು ವಂಚನೆಯ ಸಾಲದ ಮೂಲಕ ದುರ್ಬಳಕೆ ಮಾಡಿಕೊಂಡಿದ್ದಾರೆ ಆರೋಪಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ ಅಬ್ರಹಾಂ ಅವರನ್ನು ಮಂಗಳವಾರ ವಶಕ್ಕೆ ತೆಗೆದುಕೊಂಡಿದೆ. ಅನಂತರ ಬುಧವಾರ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಬ್ರಹಾಂ ಅವರು ಅಧ್ಯಕ್ಷರಾಗಿದ್ದಾಗ ಹಲವು ಹಣಕಾಸು ಅವ್ಯವಹಾರ ನಡೆದಿದೆ ಎಂದು ಸಂತ್ರಸ್ತರು ನೀಡಿದ ದೂರನ್ನು ಆಧರಿಸಿ ಈಡಿ ತನಿಖೆ ಆರಂಭಿಸಿದೆ.
ಈಗಾಗಲೇ ಸಾಲ ಹಗರಣದಿಂದ ಹಣ ಕಳೆದುಕೊಂಡ ಸಂತ್ರಸ್ತರೊಬ್ಬರು ಕೆಲವು ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು.