ಪಂಜಾಬ್ ನ ಇಬ್ಬರು ಮಾಜಿ ಸಚಿವರ ನಿವಾಸದ ಮೇಲೆ ಈಡಿ ದಾಳಿ; ದಾಖಲೆ, ಮೊಬೈಲ್ ಫೋನ್ ವಶ
ಸಾಧು ಸಿಂಗ್ ಧರಂಸೋತ್, ಸಂಘಟ್ ಸಿಂಗ್ ಗುಲ್ಜಿಯಾನ್ | Photo: PTI
ಚಂಡಿಗಢ: ಹಣ ಅಕ್ರಮ ವರ್ಗಾವಣೆ ತನಿಖೆಗೆ ಸಂಬಂಧಿಸಿದ ಅರಣ್ಯ ಹಗರಣದ ಭಾಗವಾಗಿ ಪಂಜಾಬ್ನ ಇಬ್ಬರು ಮಾಜಿ ಅರಣ್ಯ ಸಚಿವರು ಹಾಗೂ ಕಾಂಗ್ರೆಸ್ ನಾಯಕರಾದ ಸಾಧು ಸಿಂಗ್ ಧರಂಸೋತ್, ಸಂಘಟ್ ಸಿಂಗ್ ಗುಲ್ಜಿಯಾನ್ ಹಾಗೂ ಇತರರಿಗೆ ಸೇರಿದ ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ . ಅಲ್ಲದೆ, ದೋಷಾರೋಪದ ದಾಖಲೆಗಳು, ಮೊಬೈಲ್ ಫೋನ್ ಗಳು ಹಾಗೂ ಇತರ ಎಲೆಕ್ಟ್ರಾನಿಕ್ಸ್ ಸಾಧನಗಳನ್ನು ವಶಪಡಿಸಿಕೊಂಡಿದೆ.
ಮರ ಕಡಿಯಲು ಅನುಮತಿ ನೀಡಲು ಹಾಗೂ ಅರಣ್ಯ ಇಲಾಖೆಗೆ ನಿಯೋಜನೆ, ವರ್ಗಾವಣೆ ಕುರಿತಂತೆ ರಾಜ್ಯ ಅರಣ್ಯ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಎನ್ಐಎ ಶುಕ್ರವಾರ ನೀಡಿದ ಹೇಳಿಕೆಯಲ್ಲಿ ತಿಳಿಸಿದೆ.
ಪಂಜಾಬ್, ಹರ್ಯಾಣ ಹಾಗೂ ದಿಲ್ಲಿಯಲ್ಲಿರುವ ಧರಂಸೋತ್, ಗುಲ್ಜಿಯನ್, ಅವರ ಸಹವರ್ತಿಗಳು, ಅರಣ್ಯಾಧಿಕಾರಿಗಳು ಹಾಗೂ ಕೆಲವು ಖಾಸಗಿ ವ್ಯಕ್ತಿಗಳಿಗೆ ಸೇರಿದ ನಿವಾಸಗಳ ಮೇಲೆ ನವೆಂಬರ್ ೩೦ರಂದು ದಾಳಿ ನಡೆಸಲಾಗಿದೆ ಜಾರಿ ನಿರ್ದೇಶನಾಲಯ ತಿಳಿಸಿದೆ.
ಧರಂಸೋತ್ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಅಕ್ರಮ ಆಸ್ತಿ ಹೊಂದಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದ ಭಾಗವಾಗಿ ಪಂಜಾಬ್ನ ಜಾಗೃತ ದಳ ಈ ವರ್ಷದ ಆರಂಭದಲ್ಲಿ ಅವರನ್ನು ಬಂಧಿಸಿತ್ತು.
ಗುಲ್ಜಿಯನ್ ಹೋಶಿಯಾರಪುರ ಜಿಲ್ಲೆಯ ಉರ್ಮರ್ನ ಶಾಸಕರಾಗಿದ್ದಾರೆ.