ಪಾಕಿಸ್ತಾನದಿಂದ ‘ಮಿಡತೆಗಳ ದಂಡು’ ಬರುವಂತೆ ‘ಈಡಿ ದಂಡು’ ಬಂದಿದೆ: ಈಡಿ ದಾಳಿಗೆ ಗೆಹ್ಲೋಟ್ ಪ್ರತಿಕ್ರಿಯೆ
ಜೈಪುರ: ರಾಜಸ್ಥಾನ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಉಳಿದಿರುವಂತೆಯೇ, ಅನುಷ್ಠಾನ ನಿರ್ದೇಶನಾಲಯವು ಶುಕ್ರವಾರ ರಾಜ್ಯದ ಹಲವು ಸ್ಥಳಗಳಲ್ಲಿ ದಾಳಿ ನಡೆಸಿದೆ. ಜಲಜೀವನ್ ಮಿಶನ್ ಯೋಜನೆಯಲ್ಲಿ ನಡೆದಿದೆಯೆನ್ನಲಾಗಿರುವ ಅವ್ಯವಹಾರಗಳ ಬಗ್ಗೆ ನಡೆಯುತ್ತಿರುವ ಅಕ್ರಮ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿ ದಾಳಿಗಳು ನಡೆದಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ರಾಜ್ಯದ ರಾಜಧಾನಿ ಜೈಪುರ ಮತ್ತು ದೌಸ ನಗರದ 25 ಸ್ಥಳಗಳಲ್ಲಿ ದಾಳಿಗಳನ್ನು ನಡೆಸಲಾಗಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಮ್‌ಎಲ್‌ಎ)ಯ ವಿಧಿಗಳನ್ವಯ ಕೆಲವು ವ್ಯಕ್ತಿಗಳಿಗೆ ಸೇರಿರುವ ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಲಾಗಿದೆ ಎಂದು ಅಧಿಕೃತಿ ಮೂಲಗಳು ಹೇಳಿವೆ.
ಅದೇ ವೇಳೆ, ಅನುಷ್ಠಾನ ನಿರ್ದೇಶನಾಲಯದ ದಾಳಿಗಳಿಗೆ ಪ್ರತಿಕ್ರಿಯಿಸಿರುವ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಬಿಜೆಪಿಯ ಆದೇಶದಂತೆ ಕೇಂದ್ರೀಯ ತನಿಖಾ ಸಂಸ್ಥೆಗಳು ಪ್ರತಿಪಕ್ಷಗಳ ಮೇಲೆ ಮುಗಿಬಿದ್ದಿವೆ ಎಂದು ಆರೋಪಿಸಿದ್ದಾರೆ. ‘‘ದೇಶದಲ್ಲಿ ಅನುಷ್ಠಾನ ನಿರ್ದೇಶನಾಲಯದ ದಾಳಿಗಳು ನಡೆಯುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಪಾಕಿಸ್ತಾನದಿಂದ ಮಿಡತೆಗಳ ದಂಡು ಹೇಗೆ ಬರುತ್ತವೆಯೋ, ಹಾಗೆಯೇ ‘ಈಡಿ ದಂಡು’ ಇಂದು ಬರುತ್ತಿದೆ’’ ಎಂದು ಅವರು ಎಎನ್‌ಐ ಜೊತೆ ಮಾತನಾಡುತ್ತಾ ಹೇಳಿದರು.
ಸಿಬಿಐ, ಈಡಿ ಮತ್ತು ಆದಾಯ ತೆರಿಗೆ ಇಲಾಖೆ ಮುಂತಾದ ಸಂಸ್ಥೆಗಳ ವಿಶ್ವಾಸಾರ್ಹತೆ ಕುಸಿಯುತ್ತಿದೆ ಎಂದು ಅವರು ಹೇಳಿದರು. ‘‘ಇಂಥ ದಾಳಿಗಳನ್ನು ಅವರು ಹಾಸ್ಯವಾಗಿಸಿದ್ದಾರೆ. ಸಿಬಿಐ, ಈಡಿ ಮತ್ತು ಆದಾಯ ತೆರಿಗೆ ಇಲಾಖೆ ಮುಂತಾದ ಸಂಸ್ಥೆಗಳ ಸಾಮರ್ಥ್ಯವು ಕುಸಿಯುತ್ತಿದೆ ಎಂದು ಹೇಳುವ ಲೇಖನವೊಂದನ್ನು ನಾನು ಇಂದು ಓದುತ್ತಿದ್ದೆ’’ ಎಂದು ರಾಜಸ್ಥಾನ ಮುಖ್ಯಮಂತ್ರಿ ಹೇಳಿದರು.