ಸಂಸತ್ತಿನಲ್ಲಿ ಪತ್ರಿಕಾ ಸ್ವಾತಂತ್ರ್ಯದ ಕುರಿತು ಪ್ರಸ್ತಾಪಿಸಲು ರಾಹುಲ್ ಗಾಂಧಿಗೆ ಪತ್ರ ಬರೆದ ಎಡಿಟರ್ಸ್ ಗಿಲ್ಡ್
ಹೊಸದಿಲ್ಲಿ : ಸಂಸತ್ತಿನಲ್ಲಿ ಪತ್ರಿಕಾ ಸ್ವಾತಂತ್ರ್ಯ ಹಾಗೂ ಮಾಹಿತಿ ಹಕ್ಕು ಕಾಯ್ದೆಯ ಕುರಿತು ಪ್ರಸ್ತಾಪಿಸಲು ನೆರವು ಕೋರಿ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಗೆ ಪತ್ರ ಬರೆದಿರುವ ಭಾರತೀಯ ಸಂಪಾದಕರ ಒಕ್ಕೂಟ ಎಡಿಟರ್ಸ್ ಗಿಲ್ಡ್, ಮಾಧ್ಯಮಗಳನ್ನು ನಿಯಂತ್ರಿಸಲು ಸರಕಾರವು ಹಲವಾರು ಶಾಸನಸತ್ಮಕ ಕ್ರಮಗಳನ್ನು ಕೈಗೊಂಡಿದೆ ಎಂಬ ಸಂಗತಿಯನ್ನು ಅವರ ಗಮನಕ್ಕೆ ತಂದಿದೆ.
ಕಳೆದ ಕೆಲವು ವರ್ಷಗಳಿಂದ ಪತ್ರಿಕೆ, ದೂರದರ್ಶನ ಹಾಗೂ ಡಿಜಿಟಲ್ ಮಾಧ್ಯಮಗಳನ್ನು ನಿಯಂತ್ರಿಸಲು ಸರಕಾರವು ತೆಗೆದುಕೊಂಡಿರುವ ಹಲವಾರು ಶಾಸನಾತ್ಮಕ ಕ್ರಮಗಳ ಕುರಿತು ಕಳವಳ ವ್ಯಕ್ತಪಡಿಸಿರುವ ಭಾರತೀಯ ಸಂಪಾದಕರ ಒಕ್ಕೂಟ ಎಡಿಟರ್ಸ್ ಗಿಲ್ಡ್, ಈ ವಿಷಯಗಳ ಕುರಿತು ಹೊಸದಾಗಿ ಚರ್ಚೆ ಮತ್ತು ಸಮಾಲೋಚನೆಗಳು ನಡೆಯಬೇಕಾದ ಅಗತ್ಯವಿದೆ ಎಂದು ರಾಹುಲ್ ಗಾಂಧಿ ಅವರಿಗೆ ಬರೆದಿರುವ ಪತ್ರದಲ್ಲಿ ಮನವಿ ಮಾಡಿದೆ.
ಡಿಜಿಟಲ್ ಖಾಸಗಿ ದತ್ತಾಂಶ ರಕ್ಷಣೆ ಕಾಯ್ದೆ, ಪ್ರಸಾರ ಸೇವೆಗಳ ನಿಯಂತ್ರಣ ಮಸೂದೆ, ಪತ್ರಿಕೆ ಹಾಗೂ ನಿಯತಕಾಲಿಕಗಳ ನೋಂದಣಿ ಕಾಯ್ದೆ, ಮಾಹಿತಿ ತಂತ್ರಜ್ಞಾನ ನಿಯಮಗಳು , 2021 ಹಾಗೂ 2023ರಲ್ಲಿ ಈ ಕಾಯ್ದೆಗೆ ತರಲಾಗಿರುವ ತಿದ್ದುಪಡಿಗಳ ಕುರಿತೂ ಎಡಿಟರ್ಸ್ ಗಿಲ್ಡ್ ಕಳವಳ ವ್ಯಕ್ತಪಡಿಸಿದೆ.
ಸಂಬಂಧಿಸಿದ ವ್ಯಕ್ತಿಗಳೊಂದಿಗೆ ಸೂಕ್ತ ಸಮಾಲೋಚನೆ ನಡೆಸದೆ ಹಾಗೂ ಸಂಸತ್ತಿನ ಪರಿಶೀಲನೆ ಇಲ್ಲದೆ ಈ ಕಾನೂನುಗಳ ಕರಡು ರಚಿಸಿ, ಅನುಮೋದನೆ ಪಡೆಲಾಗಿದೆ ಎಂಬುದು ಎಂದೂ ಅದು ತನ್ನ ಪತ್ರದಲ್ಲಿ ಶಾಸನಾತ್ಮಕ ಕ್ರಮಗಳ ಕುರಿತು ಕಳವಳ ವ್ಯಕ್ತಪಡಿಸಿದೆ.
ಪತ್ರಿಕಾ ಸ್ವಾತಂತ್ರ್ಯ ಹಾಗೂ ವಾಕ್ ಸ್ವಾತಂತ್ರ್ಯಕ್ಕೆ ಸೂಕ್ತ ರಕ್ಷಣೆಯನ್ನು ಒದಗಿಸಲಾಗಿಲ್ಲ ಎಂಬುದರತ್ತಲೂ ಭಾರತೀಯ ಸಂಪಾದಕರ ಒಕ್ಕೂಟ ಎಡಿಟರ್ಸ್ ಗಿಲ್ಡ್ ಬೊಟ್ಟು ಮಾಡಿದೆ.