ಭಾರತವನ್ನು‘ಹಿಂದು ರಾಷ್ಟ್ರ’ವನ್ನಾಗಿಸುವ ಪ್ರಯತ್ನ ಆರಂಭಗೊಂಡಿದ್ದು 2014ರಲ್ಲಿ : ಕಂಗನಾ ರಣಾವತ್
“ನಿಜವಾದ ಅರ್ಥದಲ್ಲಿ ದೇಶವು ಸ್ವಾತಂತ್ರ್ಯ ಗಳಿಸಿದ್ದು 2014ರಲ್ಲಿ”
ಕಂಗನಾ ರಣಾವತ್ | PC: PTI
ಮಂಡಿ(ಹಿಮಾಚಲ ಪ್ರದೇಶ) : ಭಾರತವು 2014ರಲ್ಲಿ ಸ್ವತಂತ್ರಗೊಂಡಿತು ಎಂಬ ತನ್ನ ಹಿಂದಿನ ಹೇಳಿಕೆಯನ್ನು ಸೋಮವಾರ ಪುನರುಚ್ಚರಿಸಿದ ಮಂಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಂಗನಾ ರಣಾವತ್ ಅವರು, ಭಾರತವು ‘ಹಿಂದು ರಾಷ್ಟ್ರ’ವಾಗಬೇಕೆಂಬ ಬಯಕೆಯನ್ನು ವ್ಯಕ್ತಪಡಿಸಿದರು.
‘ನಮ್ಮ ಪೂರ್ವಜರು ಮುಘಲರು ಮತ್ತು ನಂತರ ಬ್ರಿಟಿಷರಡಿ ಶತಮಾನಗಳ ಕಾಲ ಗುಲಾಮಗಿರಿಯನ್ನು ಅನುಭವಿಸಿದ್ದರು. 1947ರಲ್ಲಿ ದೇಶವು ಬ್ರಿಟಿಷರಿಂದ ಸ್ವತಂತ್ರಗೊಂಡ ಬಳಿಕ ಹಲವಾರು ದಶಕಗಳ ಕಾಲ ಕಾಂಗ್ರೆಸ್ನ ದುರಾಡಳಿತವನ್ನು ಅನುಭವಿಸಿತ್ತು’ ಎಂದು ಹೇಳಿದ ಅವರು,‘ನಿಜವಾದ ಅರ್ಥದಲ್ಲಿ ದೇಶವು ಸ್ವಾತಂತ್ರ್ಯ ಗಳಿಸಿದ್ದು 2014ರಲ್ಲಿ. ಇದು ಚಿಂತನೆಗೆ ಮಾತ್ರವಲ್ಲ, ಸನಾತನಕ್ಕೂ ಸ್ವಾತಂತ್ರ್ಯವಾಗಿದೆ. ಇದು ನಮ್ಮ ಸ್ವಂತ ಧರ್ಮವನ್ನು ನಿರ್ಭೀತಿಯಿಂದ ಆಚರಿಸಲು ಮತ್ತು ಹೇಳಿಕೊಳ್ಳಲು ಹಾಗೂ ಭಾರತವನ್ನು ‘ಹಿಂದು ರಾಷ್ಟ್ರ’ವನ್ನಾಗಿಸುವ ಕನಸನ್ನು ನನಸಾಗಿಸುವತ್ತ ಮುನ್ನಡೆಯಲು ಸ್ವಾತಂತ್ರ್ಯ ನೀಡಿದೆ ’ ಎಂದರು.
‘1947ರಲ್ಲಿ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಪಾಕಿಸ್ತಾನದ ಜನನಕ್ಕೆ ಕಾರಣವಾದ ವಿಭಜನೆಯ ಸಂದರ್ಭದಲ್ಲಿ ಭಾರತವನ್ನೇಕೆ ಹಿಂದು ರಾಷ್ಟ್ರ ಎಂದು ಏಕೆ ಘೋಷಿಸಲಿಲ್ಲ. ನಾವು ಭಾರತವನ್ನು ಹಿಂದು ರಾಷ್ಟ್ರವನ್ನಾಗಿಸುವ ನಿಟ್ಟಿನಲ್ಲಿ ಶ್ರಮಿಸುತ್ತೇವೆ ’ಎಂದು ರಣಾವತ್ ಹೇಳಿದರು.
ಸಾಮಾನ್ಯವಾಗಿ ಕಾಂಗ್ರೆಸ್ ಪಕ್ಷದ ಪ್ರಾಬಲ್ಯವಿರುವ ಮಂಡಿ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರ ಪುತ್ರ ವಿಕ್ರಮಾದಿತ್ಯ ಸಿಂಗ್ ವಿರುದ್ಧ ರಣಾವತ್ ಕಣಕ್ಕಿಳಿದಿದ್ದಾರೆ. ಜೂ.1ರಂದು ಇಲ್ಲಿ ಮತದಾನ ನಡೆಯಲಿದೆ.