ಅಂಡಾಣು ಅಥವಾ ವೀರ್ಯ ದಾನಿಗೆ ಮಗುವಿನ ಮೇಲೆ ಕಾನೂನಾತ್ಮಕ ಹಕ್ಕಿಲ್ಲ : ಬಾಂಬೆ ಹೈಕೋರ್ಟ್ ತೀರ್ಪು
ಬಾಂಬೆ ಹೈಕೋರ್ಟ್ | PTI
ಹೊಸದಿಲ್ಲಿ : ಜನಿಸಿದ ಮಗುವಿನ ಮೇಲೆ ಅಂಡಾಣು ಅಥವಾ ವೀರ್ಯ ದಾನಿಗೆ ಯಾವುದೇ ಹಕ್ಕು ಇರುವುದಿಲ್ಲ ಹಾಗೂ ತಾನು ಮಗುವಿನ ಜೈವಿಕ ತಂದೆ ಅಥವಾ ತಾಯಿಯೆಂಬ ದಾವೆಯನ್ನು ಮಂಡಿಸಲು ಸಾಧ್ಯವಿಲ್ಲವೆಂದು ಬಾಂಬೆ ಹೈಕೋರ್ಟ್ ಮಂಗಳವಾರ ತೀರ್ಪು ನೀಡಿದೆ.
ಬಾಡಿಗೆ ತಾಯ್ತನದ ಮೂಲಕ ಜನಿಸಿದ ತನ್ನ ಇಬ್ಬರು ಪುತ್ರಿಯರಿಂದ ತನ್ನನ್ನು ದೂರವಿರಿಸಲಾಗಿದೆ. ತನ್ನ ಪತಿ ಹಾಗೂ ಅಂಡಾಣುದಾನಿಯಾದ ತನ್ನ ಕಿರಿಯ ಸೋದರಿಯ ಜೊತೆ ಅವರು ವಾಸಿಸುತ್ತಿದ್ದಾರೆಂದು ದೂರಿ ಮಹಿಳೆಯೊಬ್ಬರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ತೀರ್ಪು ನೀಡಿದೆ.
ಆದರೆ ಮಕ್ಕಳ ಮೇಲೆ ಅರ್ಜಿದಾರಳಿಗಿರುವ ಹಕ್ಕನ್ನು ಆಕೆ ಪತಿ ಪ್ರಶ್ನಿಸಿದ್ದಾರೆ. ತನ್ನ ಅತ್ತಿಗೆಯು ಅಂಡಾಣು ದಾನಿಯಾಗಿರುವುದರಿಂದ ತನ್ನ ಅವಳಿ ಮಕ್ಕಳ ಜೈವಿಕ ಪಾಲಕಿಯೆಂದು ಕರೆದುಕೊಳ್ಳಲು ಆಕೆಗೆ ಕಾನೂನಾತ್ಮಕ ಹಕ್ಕಿದೆ ಮತ್ತು ತನ್ನ ಪತ್ನಿಗೆ ಅವರ ಮೇಲೆ ಹಕ್ಕಿರುವುದಿಲ್ಲವೆಂದು ಹೇಳಿದ್ದರು.
ನ್ಯಾಯಮೂರ್ತಿ ಜಾಧವ್ ಅವರಿದ್ದ ಏಕಸದಸ್ಯ ಪೀಠವು ಈ ವಾದವನ್ನು ಪುರಸ್ಕರಿಸಲು ನಿರಾಕರಿಸಿದೆ. ಅರ್ಜಿದಾರಳ ಕಿರಿಯ ಸಹೋದರಿ ಅಂಡಾಣು ದಾನಿಯಾಗಿದ್ದರೂ, ಈ ಅವಳಿ ಮಕ್ಕಳ ಮೇಲೆ ಆಕೆಗೆ ಯಾವುದೇ ಕಾನೂನಾತ್ಮಕ ಹಕ್ಕಿರುವುದಿಲ್ಲವೆಂದು ಹೇಳಿದರು. ಅಲ್ಲದೆ ತನ್ನ ಐದು ವರ್ಷ ವಯಸ್ಸಿನ ಅವಳಿ ಪುತ್ರಿಯರನ್ನು ಸಂದರ್ಶಿಸುವುದಕ್ಕೆ ಅನುಮತಿ ನೀಡಿದರು.
ಬಾಡಿಗೆ ತಾಯ್ತನಕ್ಕೆ ಸಂಬಂಧಿಸಿ ಈ ಪರಿತ್ಯಕ್ತ ದಂಪತಿ ನಡುವೆ 2018ರಲ್ಲಿ ಒಪ್ಪಂದವೇರ್ಪಟ್ಟಿತ್ತು, ಆಗ 2005ರಲ್ಲಿ ಭಾರತೀಯ ವೈದ್ಯಕೀಯ ಮಂಡಳಿಯು ಜಾರಿಗೊಳಿಸಿದ್ದ ಮಾರ್ಗದರ್ಶಿ ಸೂತ್ರಗಳು ಬಾಡಿಗೆ ತಾಯ್ತನದ ಒಪ್ಪಂದವನ್ನು ನಿಯಂತ್ರಿಸುತ್ತಿದ್ದವು. ಆ ಮಾರ್ಗದರ್ಶಿ ಸೂತ್ರಗಳ ಪ್ರಕಾರ ದಾನಿ ಹಾಗೂ ಬಾಡಿಗೆ ತಾಯಿಯು ಎಲ್ಲಾ ರೀತಿಯ ಪಾಲನಾ ಹಕ್ಕುಗಳನ್ನು ತ್ಯಜಿಸಬೇಕಾಗುತ್ತದೆ. 2021ರಲ್ಲಿಯಷ್ಟೇ ಬಾಡಿಗೆ ತಾಯ್ತನ (ನಿಯಂತ್ರಣ) ಕಾನೂನು ಜಾರಿಗೆ ಬಂದಿತ್ತು.