ಮಹಾರಾಷ್ಟ್ರದಲ್ಲಿ ಮುಂದುವರಿದ ಮುಖ್ಯಮಂತ್ರಿ ಆಯ್ಕೆ ಬಿಕ್ಕಟ್ಟು: ಏಕನಾಥ್ ಶಿಂಧೆ ಸಭೆ ರದ್ದು, ಅಜಿತ್ ಪವಾರ್ ದಿಲ್ಲಿಗೆ ಪ್ರಯಾಣ
Photo credit: PTI
ಮಹಾರಾಷ್ಟ್ರ: ಹಂಗಾಮಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅಲಭ್ಯವಾದ ಕಾರಣ ಸೋಮವಾರ ನಡೆಯಬೇಕಿದ್ದ ಮುಖ್ಯಮಂತ್ರಿ ಆಯ್ಕೆ ಕುರಿತ ಅಂತಿಮ ಸಭೆ ಮತ್ತೆ ಮುಂದೂಡಿಕೆಯಾಗಿದೆ. ಈ ಮಧ್ಯೆ ಎನ್ ಸಿಪಿ ನಾಯಕ ಅಜಿತ್ ಪವಾರ್ ಸರ್ಕಾರ ರಚನೆ ವಿಳಂಬವಾಗುತ್ತಿರುವ ಬಗ್ಗೆ ಬಿಜೆಪಿಯ ಉನ್ನತ ನಾಯಕರ ಜೊತೆ ಮಾತುಕತೆಗೆ ಮತ್ತೆ ದಿಲ್ಲಿಗೆ ತೆರಳಿದ್ದಾರೆ ಎಂದು ವರದಿಯಾಗಿದೆ.
ಖಾತೆ ಹಂಚಿಕೆ ಅಂತಿಮಗೊಳಿಸಲು ಮಹಾಯುತಿ ನಾಯಕರ ಸಭೆಯಲ್ಲಿ ಪಾಲ್ಗೊಳ್ಳಬೇಕಿದ್ದ ಶಿಂಧೆ ಅವರು ಗಂಟಲು ಸೋಂಕು ಮತ್ತು ಜ್ವರದಿಂದ ಸತಾರಾದಲ್ಲಿನ ತಮ್ಮ ಸ್ವಗ್ರಾಮದಲ್ಲೇ ಉಳಿದುಕೊಂಡಿದ್ದಾರೆ ಎನ್ನಲಾಗಿದೆ.
ಬಿಜೆಪಿ, ಶಿವಸೇನೆ ಮತ್ತು ಅಜಿತ್ ಪವಾರ್ ನೇತೃತ್ವದ ಎನ್ಸಿಪಿ ಒಳಗೊಂಡಿರುವ ಮಹಾಯುತಿ ಮೈತ್ರಿಕೂಟ ನವೆಂಬರ್ 20ರಂದು ನಡೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ 288 ಸ್ಥಾನಗಳಲ್ಲಿ 230 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಬಿಜೆಪಿ ಅತಿಹೆಚ್ಚು ಎಂದರೆ 132 ಸ್ಥಾನಗಳನ್ನು ಪಡೆದುಕೊಂಡಿದೆ. ಎನ್ ಸಿಪಿ ಕ್ರಮವಾಗಿ 57 ಮತ್ತು 41 ಸ್ಥಾನಗಳನ್ನು ಪಡೆದಿವೆ. ವಿಧಾನಸಭೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗುತ್ತಾರೆಂದು ನಿರೀಕ್ಷಿಸಲಾಗಿತ್ತು.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ನಡೆದು 10 ದಿನಗಳಾಗಿದೆ. ಆದರೆ ಮುಖ್ಯಮಂತ್ರಿಗಳ ಆಯ್ಕೆ ಇನ್ನು ಕೂಡ ಕಗ್ಗಂಟಾಗಿದೆ. ಇತ್ತೀಚೆಗೆ ಸಿಎಂ ಆಯ್ಕೆ ಬಗ್ಗೆ ಬಿಜೆಪಿ ನಾಯಕ ದೇವೇಂದ್ರ ಪಡ್ನಾವೀಸ್, ಶಿವಸೇನೆಯ ಏಕನಾಥ್ ಶಿಂಧೆ, ಎನ್ ಸಿಪಿಯ ಅಜಿತ್ ಪವಾರ್ ದಿಲ್ಲಿಯಲ್ಲಿ ಅಮಿತ್ ಶಾಗೆ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಸಾರ್ವಜನಿಕವಾಗಿ ಬಿಜೆಪಿಯ ಹೇಳಿಕೆಗೆ ಬದ್ಧ ಎಂದು ಏಕನಾಥ್ ಶಿಂಧೆ ಹೇಳುತ್ತಿದ್ದರೂ, ಸಿಎಂ ಆಯ್ಕೆ ಕುರಿತ ಸಭೆ ವಿಳಂಬವಾಗುತ್ತಿದೆ. ಇದರಿಂದಾಗಿ ಅಜಿತ್ ಪವಾರ್ ಅವರು ಬಿಜೆಪಿಯ ಉನ್ನತ ನಾಯಕರನ್ನು ಭೇಟಿ ಮಾಡಲು ದಿಲ್ಲಿಗೆ ತೆರಳಿದ್ದಾರೆ.