ಮಧ್ಯಪ್ರದೇಶ | ವೃದ್ಧನಿಗೆ ಹಿಗ್ಗಾಮಗ್ಗಾ ಥಳಿಸಿ, ಎಳೆದೊಯ್ದ ವೈದ್ಯ
► ಸರತಿ ಸಾಲಿನಲ್ಲಿ ನಿಂತಿದ್ದೇ ತಪ್ಪಾಯಿತು! ► ಜಿಲ್ಲಾಸ್ಪತ್ರೆಯಲ್ಲಿ ನಡೆದ ಅಮಾನುಷ ಕೃತ್ಯ
ಭೋಪಾಲ್: ಪತ್ನಿಗೆ ಚಿಕಿತ್ಸೆಕೊಡಿಸಲು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಆಗಮಿಸಿದ ವಯೋವೃದ್ಧರೊಬ್ಬರಿಗೆ ವೈದ್ಯನೋರ್ವ ಹಿಗ್ಗಾಮಗ್ಗಾ ಥಳಿಸಿದ್ದಲ್ಲದೆ, ಆತನನ್ನು ಆಸ್ಪತ್ರೆಯ ಆವರಣದಲ್ಲಿ ದರದರನೆ ಎಳೆದೊಯ್ದು ಹಿಂಸಿಸಿದ ಘಟನೆ ಮಧ್ಯಪ್ರದೇಶದ ಛತರ್ಪುರದಲ್ಲಿ ನಡೆದಿದೆ.
ಎಪ್ರಿಲ್ 17ರಂದು ಈ ಘಟನೆ ನಡೆದಿದ್ದು, ಸ್ಥಳದಲ್ಲಿದ್ದ ಕೆಲವರು ಅದನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿದ್ದರಿಂದ ವೈರಲ್ ಆಗಿತ್ತು.
77 ವರ್ಷ ವಯಸ್ಸಿನ ಉಧವ್ಲಾಲ್ಜೋಶಿ ಅವರು ತನ್ನ ಅಸ್ವಸ್ಥ ಪತ್ನಿಗೆ ಚಿಕಿತ್ಸೆ ಕೊಡಿಸಲು ಜಿಲ್ಲಾ ಆಸ್ಪತ್ರೆಗೆ ಕರೆತಂದು ಇತರರೊಂದಿಗೆ ಕ್ಯೂನಲ್ಲಿ ನಿಂತಿದ್ದರು. ಆಸ್ಪತ್ರೆಯಲ್ಲಿ ಜನಜಂಗುಳಿಯನ್ನು ಕಂಡು ಸಿಡಿಮಿಡಿಗೊಂಡ ವೈದ್ಯರು ಯಾಕೆ ಇಷ್ಟೊಂದು ಮಂದಿ ಸರತಿ ಸಾಲಿನಲ್ಲಿ ನಿಂತಿದ್ದೀರೆಂದು ಪ್ರಶ್ನಿಸಿದರು. ಆಗ ಉಧವ್ಲಾಲ್ ಜೋಶಿ ಅವರಿಗೆ ವಿವರಿಸಲು ಯತ್ನಿಸಿದಾಗ ವೈದ್ಯನು ಅವರ ಕೆನ್ನೆಗೆ ಹೊಡೆದನೆನ್ನಲಾಗಿದೆ. ಬಳಿಕ ಅವರನ್ನು ಆಸ್ಪತ್ರೆಯೊಳಗಿರುವ ಪೊಲೀಸ್ ಚೌಕಿಯವರೆಗೆ ಎಳೆದುಕೊಂಡೇ ಹೋಗಿ, ಅಲ್ಲಿಯೇ ಕೂಡಿಹಾಕುವ ಬೆದರಿಕೆಯೊಡ್ಡಿದ್ದ ಎನ್ನಲಾಗಿದೆ.
‘‘ವೈದ್ಯರು ನನಗೆ ಥಳಿಸಿ ಪೊಲೀಸ್ ಚೌಕಿಯವರೆಗೆ ಎಳೆದೊಯ್ದರು. ಅಲ್ಲದೆ ನನ್ನ ಕನ್ನಡಕಗಳನ್ನು ಕೂಡಾ ಒಡೆದುಹಾಕಿದ್ದಾರೆ. ಆತ ನನ್ನ ಜುಬ್ಬಾವನ್ನು ಕೂಡಾ ಹರಿದುಹಾಕಿದ್ದಾನೆ ಮತ್ತು ಕೊಲ್ಲುವ ಬೆದರಿಕೆ ಹಾಕಿದ್ದಾನೆ. ನನ್ನ ಪತ್ನಿಯ ಮೇಲೂ ಹಲ್ಲೆ ನಡೆದಿದೆ ’’ಎಂದು ಜೋಶಿ ಆಪಾದಿಸಿದ್ದಾರೆ.
ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾದಾಗ ವೈದ್ಯನು ಸ್ಥಳದಿಂದ ಪರಾರಿಯಾಗಿದ್ದಾನೆ.
ಪ್ರಕರಣಕ್ಕೆ ಸಂಬಂಧಿಸಿ ಇಲಾಖಾ ತನಿಖೆಗೆ ಆದೇಶಿಸಲಾಗಿದ್ದು, ನೋಟಿಸ್ ಜಾರಿಗೊಳಿಸಲಾಗಿದೆ. ತನಿಖಾ ಸಮಿತಿಯ ಸದಸ್ಯರು ಸ್ಥಳಕ್ಕೆ ತೆರಳಿದ್ದಾರೆ ಎಂದು ಆಸ್ಪತ್ರೆಯ ಸಿವಿಲ್ ಸರ್ಜನ್ ಡಾ.ಜಿ.ಎಲ್.ಅಹಿರ್ವಾರ್ ತಿಳಿಸಿದ್ದಾರೆ.
देखिए डॉक्टर का "शैतानी रूप"
— MANOJ SHARMA LUCKNOW UP (@ManojSh28986262) April 20, 2025
70 साल के बुजुर्ग के साथ पहले मारपीट फिर घसीट कर बाहर किया गया है !!
मध्यप्रदेश के छतरपुर में इन हालात को देखकर लगता है जिला में अब सिर्फ इलाज के लिए डॉक्टरों से संपर्क न करें बल्कि अगर किसी के साथ मारपीट या गुंडागर्दी करनी है तो जिला अस्पताल में जाओ… pic.twitter.com/bwvhHvxEi3