ಬೀಫ್ ಸಾಗಾಟದ ಆರೋಪ ಹೊರಿಸಿ ಹಿರಿಯ ನಾಗರಿಕರನ್ನು ಕ್ರೂರವಾಗಿ ಥಳಿಸಿದ ದುಷ್ಕರ್ಮಿಗಳು; ವಿಡಿಯೋ ವೈರಲ್
Screengrab from the video | X/@zoo_bear
ಹೊಸದಿಲ್ಲಿ: ತನ್ನ ಮಗಳನ್ನು ಭೇಟಿಯಾಗಲು ಕಲ್ಯಾಣ್ಗೆ ತೆರಳುತ್ತಿದ್ದ ಹಿರಿಯ ನಾಗರಿಕರೊಬ್ಬನನ್ನು ರೈಲಿನೊಳಗೆ ಅಮಾನುಷವಾಗಿ ಥಳಿಸಿರುವ ಘಟನೆ ನಡೆದಿದೆ. ಘಟನೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹಲವರು ಆಗ್ರಹಿಸಿದ್ದಾರೆ.
ಸಂತ್ರಸ್ತನನ್ನು ಜಲಗಾಂವ್ ಜಿಲ್ಲೆಯ ಹಳ್ಳಿಯ ಹಾಜಿ ಅಶ್ರಫ್ ಮುನ್ಯಾರ್ ಎಂದು ಗುರುತಿಸಲಾಗಿದ್ದು, ಕಲ್ಯಾಣ್ಗೆ ತೆರಳುತ್ತಿದ್ದಾಗ ಇಗತ್ಪುರಿ ಬಳಿ ಬೀಫ್ ಸಾಗಿಸುತ್ತಿದ್ದಾರೆ ಎಂದು ಶಂಕಿಸಿ ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ದಾಳಿಯ ನಂತರ, ವೃದ್ಧ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವದಂತಿಗಳು ಹರಡಿದ್ದವು. ವದಂತಿಗಳನ್ನು ಅವರ ಕುಟುಂಬವು ನಿರಾಕರಿಸಿದೆ. ಅಶ್ರಫ್ ಮುನ್ಯಾರ್ ಅವರು ಪ್ರಸ್ತುತ ಕಲ್ಯಾಣ್ನಲ್ಲಿರುವ ತಮ್ಮ ಮಗಳ ಮನೆಯಲ್ಲಿದ್ದಾರೆ ಎಂದು ಖಚಿತಪಡಿಸಿದ್ದಾರೆ. ಅವರ ಪುತ್ರ ಅಶ್ಫಾಕ್ ಇಗತ್ಪುರಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಬಂಧ ದೂರು ದಾಖಲಿಸಿದ್ದಾರೆ.
ಆಲ್ಟ್ ನ್ಯೂಸ್ ಸಹ-ಸಂಸ್ಥಾಪಕ ಮುಹಮ್ಮದ್ ಝುಬೈರ್ ಅವರು ಘಟನೆಯ ಬಗ್ಗೆ ಕಠಿಣ ಕ್ರಮಕ್ಕೆ ಒತ್ತಾಯಿಸಿ ಸರಣಿ ಟ್ವೀಟ್ಗಳನ್ನು ಮಾಡಿದ್ದಾರೆ.
"ಜಲಗಾಂವ್ ಜಿಲ್ಲೆಯ ಹಳ್ಳಿಯೊಂದರ ಹಾಜಿ ಅಶ್ರಫ್ ಮುನ್ಯಾರ್ ತನ್ನ ಮಗಳನ್ನು ಭೇಟಿಯಾಗಲು ಕಲ್ಯಾಣ್ಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಇಗತ್ಪುರಿ ಬಳಿ ರೈಲಿನಲ್ಲಿ ಗೂಂಡಾಗಳು ಗೋಮಾಂಸ ಸಾಗಿಸುತ್ತಿದ್ದಾರೆಂದು ಆರೋಪಿಸಿ ನಿಂದಿಸಿ ಥಳಿಸಿದ್ದಾರೆ" ಎಂದು ಅವರು ಮೊದಲ ಟ್ವೀಟ್ನಲ್ಲಿ ಬರೆದಿದ್ದಾರೆ.
ಮತ್ತೊಂದು ಟ್ವೀಟ್ ನಲ್ಲಿ ತನ್ನ ಮಗಳನ್ನು ಭೇಟಿ ಮಾಡಲು ಕಲ್ಯಾಣ್ಗೆ ಪ್ರಯಾಣಿಸುತ್ತಿದ್ದ ಮುಸ್ಲಿಮ್ ವೃದ್ಧರೊಬ್ಬರನ್ನು ಗೂಂಡಾಗಳು ರೈಲಿನೊಳಗೆ ನಿಂದಿಸಿ ಕ್ರೂರವಾಗಿ ಥಳಿಸಿದ್ದಾರೆ. ಎರಡೂ ವಿಡಿಯೋಗಳಲ್ಲಿ ಕಂಡುಬರುವ ಈ ಎಲ್ಲಾ ಗೂಂಡಾಗಳ ವಿರುದ್ಧ ಕಠಿಣ ಕ್ರಮವನ್ನು ನಾವು ನಿರೀಕ್ಷಿಸಬಹುದೇ ಎಂದು ಅವರು ಮತ್ತೊಂದು ಪೋಸ್ಟ್ನಲ್ಲಿ ಪ್ರಶ್ನಿಸಿದ್ದಾರೆ.
"ವಯಸ್ಸಾದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ವದಂತಿಗಳು ಹರಡುತ್ತಿವೆ. ಇದು ನಿಜವಲ್ಲ. ಅವರು ಪ್ರಸ್ತುತ ಕಲ್ಯಾಣ್ನಲ್ಲಿರುವ ತಮ್ಮ ಮಗಳ ಮನೆಯಲ್ಲಿದ್ದಾರೆ. ಅವರ ಮಗ ಅಶ್ಫಾಕ್ ಇಗತ್ಪುರಿ ರೈಲ್ವೇ ಪೊಲೀಸ್ಗೆ ದೂರು ದಾಖಲಿಸಿದ್ದಾರೆ," ಎಂದು ಅವರು ಬರೆದಿದ್ದಾರೆ.