ಚುನಾವಣಾ ಬಾಂಡ್ | ಸುಪ್ರೀಂ ಕೋರ್ಟ್ ತೀರ್ಪು ಕಾದಿರಿಸಿದ ನಂತರ 8,350 ಕೋಟಿ ರೂ. ಮೊತ್ತದ ಚುನಾವಣಾ ಬಾಂಡ್ ಗಳನ್ನು ಮುದ್ರಿಸಿದ ಬಿಜೆಪಿ ಸರಕಾರ : ಆರ್ ಟಿ ಐ ನಿಂದ ಬಹಿರಂಗ
Image | PC: Shutterstock
ಹೊಸದಿಲ್ಲಿ: 2024ರಲ್ಲಿ ನರೇಂದ್ರ ಸರಕಾರವು ಗಮನಾರ್ಹ ಸಂಖ್ಯೆಯ ಚುನಾವಣಾ ಬಾಂಡ್ ಗಳನ್ನು ಮುದ್ರಿಸಿರುವುದು ಹೋರಾಟಗಾರ ಕಮೊಡೊರ್ ಲೋಕೇಶ್ ಬಾತ್ರಾ ಅವರು ಸಲ್ಲಿಸಿದ್ದ ಮಾಹಿತಿ ಹಕ್ಕು ಕಾಯ್ದೆ ಅರ್ಜಿಯಿಂದ ಬಹಿರಂಗಗೊಂಡಿದೆ. ನಿರ್ದಿಷ್ಟವಾಗಿ, ಈ ಅವಧಿಯಲ್ಲಿ ತಲಾ 1 ಕೋಟಿ ರೂ. ಮೊತ್ತದ 8,350 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್ ಗಳನ್ನು ಮುದ್ರಿಸಲಾಗಿದೆ. ನವೆಂಬರ್ 2023ರಲ್ಲಿ ಚುನಾವಣಾ ಬಾಂಡ್ ಗಳ ಸಾಂವಿಧಾನಿಕ ಸಿಂಧುತ್ವದ ಕುರಿತು ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು ಕಾದಿರಿಸಿದ ನಂತರ ಈ ಚುನಾವಣಾ ಬಾಂಡ್ ಗಳನ್ನು ಮುದ್ರಿಸಲಾಗಿದೆ ಎಂದು ತಿಳಿದು ಬಂದಿದೆ.
ಬಾತ್ರಾ ಅವರ ಮಾಹಿತಿ ಹಕ್ಕು ಕಾಯ್ದೆ ಅರ್ಜಿಗೆ ಪ್ರತಿಯಾಗಿ ಚುನಾವಣಾ ಬಾಂಡ್ ಗಳನ್ನು ವಿತರಿಸುವ ಅಧಿಕಾರ ಹೊಂದಿರುವ ಭಾರತೀಯ ಸ್ಟೇಟ್ ಬ್ಯಾಂಕ್ ಈ ಮಾಹಿತಿಯನ್ನು ಒದಗಿಸಿದೆ.
2018ರಿಂದ ಇಲ್ಲಿಯವರೆಗೆ ಭಾರತೀಯ ಜನತಾ ಪಕ್ಷವು ರೂ. 8,251.8 ಕೋಟಿ ಮೊತ್ತವನ್ನು ಚುನಾವಣಾ ಬಾಂಡ್ ಗಳ ಮೂಲಕ ದೇಣಿಗೆ ಪಡೆದಿರುವುದು ಭಾರತೀಯ ಚುನಾವಣಾ ಆಯೋಗವು ಪ್ರಕಟಿಸಿರುವ ದತ್ತಾಂಶದಿಂದ ಬಹಿರಂಗಗೊಂಡಿದೆ. ಇದೇ ಅವಧಿಯಲ್ಲಿ ಎಲ್ಲ ರಾಜಕೀಯ ಪಕ್ಷಗಳು ಒಟ್ಟು ರೂ. 16,518 ಕೋಟಿ ಮೊತ್ತದ ದೇಣಿಗೆಯನ್ನು ಚುನಾವಣಾ ಬಾಂಡ್ ಮೂಲಕ ಸ್ವೀಕರಿಸಿದ್ದು, ಬಿಜೆಪಿಯೊಂದೇ ಸುಮಾರು ಶೇ. 50ರಷ್ಟು ದೇಣಿಗೆಯನ್ನು ಚುನಾವಣಾ ಬಾಂಡ್ ಮೂಲಕ ಸ್ವೀಕರಿಸಿದೆ. ವಿಶೇಷವೆಂದರೆ ಚುನಾವಣಾ ಬಾಂಡ್ ಯೋಜನೆಯ ಕುರಿತು ಸುಪ್ರಿಂ ಕೋರ್ಟ್ ತೀರ್ಪು ಕಾದಿರಿಸಿದ ನಂತರ ಭಾರತೀಯ ಜನತಾ ಪಕ್ಷವು 8,350 ಕೋಟಿ ರೂ.ಮೌಲ್ಯದ ಚುನಾವಣಾ ಬಾಂಡ್ ಗಳನ್ನು ಮುದ್ರಿಸಿದೆ ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ತಿಳಿದು ಬಂದಿದೆ.
ಚುನಾವಣಾ ಬಾಂಡ್ ಮುದ್ರಿಸುವ ಮತ್ತು ಅವುಗಳನ್ನು ನಿರ್ವಹಿಸುವ ವೆಚ್ಚವನ್ನು ದೇಣಿಗೆದಾರರು ಅಥವಾ ರಾಜಕೀಯ ಪಕ್ಷಗಳ ಬದಲಿಗೆ ತೆರಿಗೆದಾರರೇ ಭರಿಸಬೇಕಿದೆ ಎಂಬ ಸಂಗತಿ ಈ ಮುನ್ನ ಬಾತ್ರಾ ಸಲ್ಲಿಸಿದ್ದ ಆರ್ ಟಿ ಐ ಅರ್ಜಿಯಿಂದ ತಿಳಿದು ಬಂದಿತ್ತು. 2018ರಿಂದ 2023ರ ನಡುವಿನ ಚುನಾವಣಾ ಬಾಂಡ್ ಯೋಜನೆಗೆ ಸಂಬಂಧಿಸಿದ ಮುದ್ರಣ, ಕಮಿಷನ್ ಹಾಗೂ ಇನ್ನಿತರ ಕಾರ್ಯಾಚರಣೆ ವೆಚ್ಚಗಳಾಗಿ ಭಾರತೀಯ ಸ್ಟೇಟ್ ಬ್ಯಾಂಕ್, ಕೇಂದ್ರ ಸರಕಾರಕ್ಕೆ ರೂ. 13.50 ಕೋಟಿ ಮೊತ್ತದ ಶುಲ್ಕವನ್ನು ವಿಧಿಸಿದೆ.
ಯೋಜನೆಯ ಕುರಿತು ಕಾನೂನಾತ್ಮಕ ವಿಚಾರಣೆ ನಡೆಯುತ್ತಿದ್ದರೂ, 2024ರಲ್ಲಿ ಗಮನಾರ್ಹ ಸಂಖ್ಯೆಯ ಚುನಾವಣಾ ಬಾಂಡ್ ಗಳನ್ನು ಮುದ್ರಿಸಿರುವುದರ ಹಿಂದಿನ ಉದ್ದೇಶವು ಊಹಾಪೋಹಗಳಿಗೆ ಕಾರಣವಾಗಿದೆ. ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಯಥಾಸ್ಥಿತಿ ಪಾಲನೆಯ ಆದೇಶ ನೀಡಿರುವುದರಿಂದ ಕೇಂದ್ರ ಸರಕಾರಕ್ಕೆ ಈ ನಿರ್ಧಾರ ಕೈಗೊಳ್ಳುವ ವಿಶ್ವಾಂಸ ಮೂಡಿರಬಹುದು ಎಂದು ಬಾತ್ರಾ ಅಭಿಪ್ರಾಯ ಪಡುತ್ತಾರೆ.
“ಸುಪ್ರೀಂ ಕೋರ್ಟ್ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲಿದೆ ಎಂಬ ವಿಶ್ವಾಸದಲ್ಲಿ ಸರಕಾರ ಇದ್ದಿರುವಂತಿದೆ. ಹೀಗಾಗಿಯೇ ಅದು ರೂ. 1 ಕೋಟಿ ಮೌಲ್ಯದ ಚುನಾವಣಾ ಬಾಂಡ್ ಗಳನ್ನು ಮುದ್ರಣವನ್ನು ಮುಂದುವರಿಸಿದೆ” ಎಂದು ಬಾತ್ರಾ ಅಭಿಪ್ರಾಯ ಪಟ್ಟಿದ್ದಾರೆ ಎಂದು The Wire ಸುದ್ದಿ ಸಂಸ್ಥೆ ವರದಿ ಮಾಡಿದೆ.
ಆದರೆ, ಫೆಬ್ರವರಿ 15ರಂದು ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್ ಯೋಜನೆಗೆ ಭಾರಿ ಹೊಡೆತ ನೀಡಿದ್ದು, ಈ ಯೋಜನೆಯು ಅಸಾಂವಿಧಾನಿಕ ಹಾಗೂ ಮತದಾರರ ಮಾಹಿತಿ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ತೀರ್ಪು ನೀಡಿತ್ತು. ಇದರೊಂದಿಗೆ ಚುನಾವಣಾ ಬಾಂಡ್ ಗಳ ವಿವರಗಳನ್ನು ಚುನಾವಣಾ ಆಯೋಗಕ್ಕೆ ಒದಗಿಸುವಂತೆ ಭಾರತೀಯ ಸ್ಟೇಟ್ ಬ್ಯಾಂಕ್ ಗೆ ಸೂಚಿಸಿತ್ತು. ಈ ವರ್ಷ 8,350 ಕೋಟಿ ರೂ. ಮೊತ್ತದ ಹೆಚ್ಚುವರಿ ಚುನಾವಣಾ ಬಾಂಡ್ ಗಳನ್ನು ಮುದ್ರಿಸಲು ಹಾಗೂ ನಿರ್ವಹಿಸಲು ವ್ಯಯ ಮಾಡಿರುವ ಮೊತ್ತದ ಕುರಿತು ಇನ್ನಷ್ಟೇ ವಿವರಗಳು ಬಹಿರಂಗಗೊಳ್ಳಬೇಕಿದೆ.