ಚುನಾವಣಾ ಬಾಂಡ್ ಮಾಹಿತಿ ವಿಶ್ಲೇಷಣೆಯಿಂದ ಮತ್ತಷ್ಟು ಅಂಶ ಬಹಿರಂಗ...
Photo: PTI
ಹೊಸದಿಲ್ಲಿ: ಸುಪ್ರೀಂಕೋರ್ಟ್ ಆದೇಶದಂತೆ ಚುನಾವಣಾ ಆಯೋಗ ತನ್ನ ವೆಬ್ಸೈಟ್ ನಲ್ಲಿ ಚುನಾವಣಾ ಬಾಂಡ್ ಖರೀದಿಸಿದವರ ಹೆಸರುಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಹೆಸರುಗಳಿಗೆ ಸಂಬಂಧಿಸಿದ ಕಂಪನಿಗಳ ಮಾಹಿತಿಯನ್ನು ವಿಶ್ಲೇಷಿಸಿದಾಗ ಇನ್ನಷ್ಟು ಅಂಶಗಳು ಬಹಿರಂಗವಾಗಿವೆ.
ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ 1260 ಕಂಪನಿಗಳು ಹಾಗೂ ವ್ಯಕ್ತಿಗಳು 12,769 ಕೋಟಿ ರೂಪಾಯಿ ಮೌಲ್ಯದ ಚುನಾವಣಾ ಬಾಂಡ್ ಖರೀದಿಸಿದ್ದು, ಇದರಲ್ಲಿ ಅಗ್ರ 20 ಕಂಪನಿಗಳ ಪಾಲು 5945 ಕೋಟಿ ರೂಪಾಯಿ. ಅಂದರೆ ಒಟ್ಟು ಮೌಲ್ಯದ ಸುಮಾರು ಶೇಕಡ 50ರಷ್ಟು.
ವೈಯಕ್ತಿಕ ದೇಣಿಗೆಯಲ್ಲಿ 45 ಕೋಟಿ ದೇಣಿಗೆ ನೀಡಿದ ಎನ್.ಎಸ್.ಮೊಹಾಂತಿ ಅತಿದೊಡ್ಡ ದಾನಿ. ಲಕ್ಷ್ಮಿ ನಿವಾಸ್ ಮಿತ್ತಲ್ 35 ಕೋಟಿಯೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಲಕ್ಷ್ಮೀದಾಸ್ ವಲ್ಲಭದಾಸ್ ಅಸ್ಮಿತಾ ಮೆರ್ಚಾ (25), ಕೆ.ಆರ್.ರಾಜಾ ಜೆಟಿ (25), ರಾಹುಲ್ ಭಾಟಿಯಾ (20), ರಾಜೇಶ್ ಮನ್ನಾಲಾಲ್ ಅಗರ್ ವಾಲ್ (13), ಸುರೇಶ್ ಗುಪ್ತಾ, ರಾಜು ಕುಮಾರ್ ಶರ್ಮಾ, ರಾಹುಲ್ ಜಗನ್ನಾಥ್ ಜೋಶಿ, ಹಮೇಶ್ ರಾಹುಲ್ ಜೋಶಿ (ತಲಾ 10 ಕೋಟಿ), ಅನಿತಾ ಹೇಮಂತ್ ಶಾ (8 ಕೋಟಿ) ನಂತರದ ಸ್ಥಾನಗಳಲ್ಲಿದ್ದಾರೆ.
ದೇಣಿಗೆ ನೀಡಿದ ಸುಮಾರು 500 ಕಂಪನಿಗಳ ಪೈಕಿ 28 ಕಂಪನಿಗಳು 2019ರ ಏಪ್ರಿಲ್ 12ರ ಬಳಿಕ ಸ್ಥಾಪನೆಯಾದ ಕಂಪನಿಗಳು. 20 ಅಗ್ರ ಖರೀದಿದಾರ ಕಂಪನಿಗಳ ಪೈಕಿ 13 ಕಂಪನಿಗಳ ಹಣಕಾಸು ಫಲಿತಾಂಶ ಲಭ್ಯವಿದ್ದು, ತಮ್ಮ ನಿವ್ವಳ ಲಾಭದ ಪ್ರಮಾಣಾನುಸಾರ ಈ ಕಂಪನಿಗಳು ಬಾಂಡ್ ಖರೀದಿಸಿವೆ.