ಚುನಾವಣಾ ಬಾಂಡ್ ವಿಚಾರ: SBI ವಿರುದ್ಧ ನ್ಯಾಯಾಂಗ ನಿಂದನೆ ಕ್ರಮಕ್ಕೆ ಕೋರಿ ಸುಪ್ರೀಂ ಕೋರ್ಟ್ ಕದ ತಟ್ಟಿದ ಎಡಿಆರ್
SBI, ಸುಪ್ರೀಂ ಕೋರ್ಟ್ | Photo: PTI
ಹೊಸದಿಲ್ಲಿ: ಚುನಾವಣಾ ಬಾಂಡ್ ಗಳ ಕುರಿತು ಮಾಹಿತಿ ಸಲ್ಲಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ (SBI) ಸುಪ್ರೀಂ ಕೋರ್ಟ್ ನೀಡಿದ್ದ ಗಡುವು ಮುಕ್ತಾಯಗೊಂಡ ಮರುದಿನ ಎನ್ಜಿಒ ಅಸೋಸಿಯೇಶನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ ನ್ಯಾಯಾಂಗ ನಿಂದನೆ ಪ್ರಕರಣವನ್ನು ದಾಖಲಿಸಿದೆ. ಸುಪ್ರೀಂ ಕೋರ್ಟ್ ನೀಡಿದ್ದ ಗಡುವಿನೊಳಗೆ SBI ಮಾಹಿತಿ ನೀಡಲು ವಿಫಲವಾದ ಹಿನ್ನೆಲೆಯಲ್ಲಿ ಎಡಿಆರ್ ಈ ಕ್ರಮಕ್ಕೆ ಮುಂದಾಗಿದ್ದು ಸುಪ್ರೀಂ ಆದೇಶ ಪಾಲಿಸಲು ವಿಫಲವಾದ SBI ವಿರುದ್ಧ ನ್ಯಾಯಾಂಗ ನಿಂದನೆ ಕ್ರಮಕೈಗೊಳ್ಳಬೇಕೆಂದು ಕೋರಿದೆ.
ಫೆಬ್ರವರಿ 15ರಂದು ಚುನಾವಣಾ ಬಾಂಡ್ ಯೋಜನೆಯನ್ನು ಅಸಂವಿಧಾನಿಕ ಎಂದು ಘೋಷಿಸಿ ಸುಪ್ರೀಂ ಕೋರ್ಟ್ ಅದನ್ನು ರದ್ದುಗೊಳಿಸಿತ್ತಲ್ಲದೆ ಎಪ್ರಿಲ್ 12, 2019ರಿಂದ ಚುನಾವಣಾ ಬಾಂಡ್ಗಳ ಮೂಲಕ ದೇಣಿಗೆ ಪಡೆದ ರಾಜಕೀಯ ಪಕ್ಷಗಳ ವಿವರಗಳನ್ನು ಸಲ್ಲಿಸುವಂತೆ SBIಗೆ ಸೂಚಿಸಿತ್ತು.
ಎಡಿಆರ್ ಮತ್ತು ಕಾಮನ್ ಕಾಸ್ ಸಂಘಟನೆಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿ ಈ ಆದೇಶ ಹೊರಡಿಸಲಾಗಿತ್ತು.
ಆದರೆ ಚುನಾವಣಾ ಬಾಂಡ್ ಗಳ ಕುರಿತು ಮಾಹಿತಿಯನ್ನು ಸಲ್ಲಿಸದೇ ಇದ್ದ SBI ಮಾರ್ಚ್ 4ರಂದು ಸುಪ್ರೀಂ ಕೋರ್ಟ್ ಕದ ತಟ್ಟಿ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ನೀಡಲು ಜೂನ್ 30ರ ತನಕ ಸಮಯಾವಕಾಶ ವಿಸ್ತರಿಸಬೇಕೆಂದು ಕೋರಿತ್ತು.
ಎಪ್ರಿಲ್ 12, 2019ರಿಂದ ಫೆಬ್ರವರಿ 15, 2024ರ ನಡುವೆ 22,217 ಚುನಾವಣಾ ಬಾಂಡ್ ಗಳನ್ನು ಮಾರಾಟ ಮಾಡಲಾಗಿದೆ. ಈ ಬಾಂಡ್ ಗಳ ಖರೀದಿ ಕುರಿತ ಮಾಹಿತಿ ಕೇಂದ್ರೀಕೃತವಾಗಿ ಇರಿಸಲಾಗಿಲ್ಲ ಎಂದು SBI ಹೇಳಿತ್ತು.