ಚುನಾವಣಾ ಬಾಂಡ್ | ಅಂಕಿ ಅಂಶಗಳ ತನಿಖೆಗೆ ಎಸ್ಐಟಿ ರಚಿಸುವಂತೆ ಕೋರಿರುವ ಅರ್ಜಿಯನ್ನು ಶೀಘ್ರವೇ ಪಟ್ಟಿ ಮಾಡಲಾಗುವುದು : ಸುಪ್ರೀಂ ಕೋರ್ಟ್ ಭರವಸೆ
ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ: ಚುನಾವಣಾ ಬಾಂಡ್ ವಿವರಗಳ ಮೂಲಕ ಬಹಿರಂಗಗೊಂಡಿರುವ ಪರಸ್ಪರ ನೆರವು, ಭ್ರಷ್ಟಾಚಾರ ಹಾಗೂ ಕಿಕ್ ಬ್ಯಾಕ್ ಗಳ ಪ್ರತಿ ನಿದರ್ಶನಗಳ ಕುರಿತು ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ರಚಿಸಬೇಕು ಎಂದು ಕೋರಿ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಸಲ್ಲಿಸಿರುವ ಅರ್ಜಿಯನ್ನು ಶೀಘ್ರವೇ ವಿಚಾರಣೆಗೆ ಪಟ್ಟಿ ಮಾಡಲಾಗುವುದು ಎಂದು ಮಂಗಳವಾರ ಸುಪ್ರೀಂ ಕೋರ್ಟ್ ಭರವಸೆ ನೀಡಿತು.
ಅರ್ಜಿಯನ್ನು ವಿಚಾರಣೆಗೆ ಶೀಘ್ರವಾಗಿ ಪಟ್ಟಿ ಮಾಡಬೇಕು ಎಂದು ಪ್ರಶಾಂತ್ ಭೂಷಣ್ ಅವರು ನ್ಯಾ. ಸಂಜೀವ್ ಖನ್ನಾ ಅವರನ್ನು ಕೋರಿದಾಗ, ಅರ್ಜಿಯು ಮುಖ್ಯ ನ್ಯಾಯಾಧೀಶರ ಮುಂದಿದ್ದು, ಅವರು ಅರ್ಜಿ ವಿಚಾರಣೆಯ ದಿನಾಂಕ ಹಾಗೂ ನ್ಯಾಯಪೀಠವನ್ನು ನಿಗದಿ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.
ಕಾಮನ್ ಕಾಸ್ ಆ್ಯಂಡ್ ದಿ ಸೆಂಟರ್ ಫಾರ್ ಪಬ್ಲಿಕ್ ಇಂಟರೆಸ್ಟ್ ಲಿಟಿಗೇಶನ್ ಸಂಸ್ಥೆಯು ಸಲ್ಲಿಸಿರುವ ಅರ್ಜಿಯನ್ನು ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ಪ್ರಶಾಂತ್ ಭೂಷಣ್, ವಕೀಲರಾದ ಚೆರಿಲ್ ಡಿಸೋಝಾ ಹಾಗೂ ನೇಹಾ ರಾಠಿ, “ದೇಶದ ಪ್ರಮುಖ ತನಿಖಾ ಸಂಸ್ಥೆಗಳಾದ ಕೇಂದ್ರೀಯ ತನಿಖಾ ದಳ (ಸಿಬಿಐ), ಜಾರಿ ನಿರ್ದೇಶನಾಲಯ (ಈಡಿ) ಹಾಗೂ ಆದಾಯ ತೆರಿಗೆ (ಐಟಿ) ಇಲಾಖೆಯು ಭ್ರಷ್ಟಾಚಾರದ ಸಾಧನಗಳಾಗಿರುವಂತೆ ಕಂಡು ಬರುತ್ತಿದೆ” ಎಂದು ಅಭಿಪ್ರಾಯ ಪಟ್ಟರು.
ತನಿಖೆಯ ಫಲಿತಾಂಶದ ಮೇಲೆ ದೊಡ್ಡ ಪ್ರಮಾಣದ ಪ್ರಭಾವ ಬೀರಲು, ಈ ತನಿಖಾ ಸಂಸ್ಥೆಗಳಿಂದ ತನಿಖೆಗೊಳಗಾಗುತ್ತಿದ್ದ ವಿವಿಧ ಸಂಸ್ಥೆಗಳು ಆಡಳಿತಾರೂಢ ಸರಕಾರಕ್ಕೆ ಭಾರಿ ಪ್ರಮಾಣದ ದೇಣಿಗೆಯನ್ನು ನೀಡಿವೆ ಎಂದೂ ಅವರು ಆರೋಪಿಸಿದರು.