ಚುನಾವಣಾ ಬಾಂಡ್: ನಷ್ಟದಲ್ಲಿ ನಡೆಯುತ್ತಿದ್ದ 33 ಕಂಪನಿಗಳಿಂದ 582 ಕೋಟಿ ರೂ. ದೇಣಿಗೆ; ಶೇ 75ರಷ್ಟು ಬಿಜೆಪಿಗೆ
Photo :thehindu.com
ಹೊಸದಿಲ್ಲಿ: ಚುನಾವಣಾ ಬಾಂಡ್ಗಳ ಮೂಲಕ ವಿವಿಧ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿದ ಕನಿಷ್ಠ 45 ಕಂಪೆನಿಗಳ ಆರ್ಥಿಕ ಪರಿಸ್ಥಿತಿಯನ್ನು ಅವುಗಳು ನೀಡಿದ ದೇಣಿಗೆ ಮೊತ್ತದೊಂದಿಗೆ ಹೋಲಿಕೆ ಮಾಡುವುದು ಸಿಎಂಐಇ ಪ್ರೊವೆಸ್ ಐಕ್ಯೂ ಡೇಟಾಬೇಸ್ನಿಂದ ಸಾಧ್ಯವಾಗಿದೆ.
ಈ 45 ಕಂಪೆನಿಗಳ ಪೈಕಿ 33 ಕಂಪನಿಗಳು ಒಟ್ಟು ರೂ. 576.2 ಕೋಟಿ ದೇಣಿಗೆ ಬಾಂಡ್ ರೂಪದಲ್ಲಿ ನೀಡಿದ್ದು ಅದರಲ್ಲಿ ಸುಮಾರು ಶೇ 75ರಷ್ಟು ಅಂದರೆ ರೂ 434.2 ಕೋಟಿ ದೇಣಿಗೆ ಬಿಜೆಪಿಗೆ ಹೋಗಿದೆ ಎಂದು thehindu.com ವರದಿ ಮಾಡಿದೆ.
ಅಚ್ಚರಿಯೆಂದರೆ ಈ ಕಂಪೆನಿಗಳು 2016-17ರಿಂದ 2022-23ರವರೆಗೆ ತೆರಿಗೆ ನಂತರ ಶೂನ್ಯ ಲಾಭ ಪಡೆದಿವೆ. ಈ 33 ಕಂಪನಿಗಳು ಒಟ್ಟು ನಿವ್ವಳ ನಷ್ಟ ರೂ. 1 ಲಕ್ಷ ಕೋಟಿಗೂ ಅಧಿಕವಾಗಿದೆ. ಈ 33 ಕಂಪನಿಗಳ ಪೈಕಿ 16 ಕಂಪನಿಗಳು ಶೂನ್ಯ ಅಥವಾ ನೆಗೆಟಿವ್ ನೇರ ತೆರಿಗೆಗಳನ್ನು ಪಾವತಿಸಿವೆ. ಅಂದೆ ಈ ನಷ್ಟದಲ್ಲಿ ನಡೆಯುತ್ತಿರುವ ಕಂಪೆನಿಗಳು ದೊಡ್ಡ ಮೊತ್ತದ ದೇಣಿಗೆ ಮಾಡಿರುವುದು ಅವುಗಳು ತಮ್ಮ ಲಾಭ ನಷ್ಟಗಳ ಕುರಿತು ತಪ್ಪು ಮಾಹಿತಿ ನೀಡಿದ ಇತರ ಕಂಪೆನಿಗಳು ಪರೋಕ್ಷವಾಗಿ ನೀಡಿರುವ ದೇಣಿಗೆಗಳನ್ನು ತಮ್ಮ ಕಂಪೆನಿಗಳ ಹೆಸರಿನಲ್ಲಿ ನೀಡಿರಬಹುದು ಎಂಬ ಶಂಕೆ ಮೂಡಿದ್ದು ಇದು ಅಕ್ರಮ ನಗದು ವರ್ಗಾವಣೆಯ ಸಾಧ್ಯತೆಯೂ ಇರಬಹುದೆಂದು ಶಂಕಿಸಲಾಗಿದೆ.
ಆರು ಕಂಪೆನಿಗಳ ಒಟ್ಟು ದೇಣಿಗೆ ಮೊತ್ತ ರೂ. 646 ಕೋಟಿ ಅಗಿದ್ದರೆ ಅದರಲ್ಲಿ ರೂ. 601 ಕೋಟಿ (ಶೇ 93) ಬಿಜೆಪಿಗೆ ಹೋಗಿದೆ. ಈ ಕಂಪನಿಗಳು 2016-17ರಿಂದ 2022-23ವರೆಗೆ ನಿವ್ವಳ ಲಾಭ ಗಳಿಸಿದ್ದವು ಆದರೆ ಅವುಗಳು ಚುನಾವಣಾ ಬಾಂಡ್ಗಳ ಮೂಲಕ ನೀಡಿದ ದೇಣಿಗೆ ಅವುಗಳ ನಿವ್ವಳ ಲಾಭಕ್ಕಿಂತ ಹೆಚ್ಚಾಗಿದ್ದವು.
ಮೂರು ಕಂಪೆನಿಗಳು ರೂ 193.8 ಕೋಟಿ ದೇಣಿಗೆ ನೀಡಿದ್ದು ಇದರಲ್ಲಿ ಶೇ 15 ಅಂದರೆ ರೂ 28.3 ಕೋಟಿ ಬಿಜೆಪಿಗೆ ಹೋಗಿದೆ, ಉಳಿದಂತೆ ಕಾಂಗ್ರೆಸ್ ಪಕ್ಷ ಶೇ 47ರಷ್ಟು ಅಂದರೆ ರೂ 91.6 ಕೋಟಿ, ಟಿಎಂಸಿ ಶೇ 24ರಷ್ಟು, ಅಂದರೆ ರೂ 45.9 ಕೋಟಿ ಪಡೆದಿವೆ. ಇವುಗಳ ಹೊರತಾಗಿ ಬಿಆರ್ಎಸ್ ಮತ್ತು ಬಿಜೆಡಿ ರೂ 10 ಕೋಟಿ ಪಡೆದಿದ್ದರೆ ಆಪ್ ರೂ 7 ಕೋಟಿ ಪಡೆದಿವೆ. ಈ ಮೂರು ಕಂಪನಿಗಳು ಪಾಸಿಟಿವ್ ನಿವ್ವಳ ಲಾಭ ಗಳಿಸಿದ್ದರೂ ಒಟ್ಟು ನೇರ ತೆರಿಗೆಗಳು ನೆಗೆಟಿವ್ ಆಗಿವೆ. ಇಂತಹ ಕಂಪೆನಿಗಳು ತೆರಿಗೆ ತಪ್ಪಿಸಿರಬಹುದೆಂಬ ಶಂಕೆಯಿದೆ.
ಮೂರು ಕಂಪೆನಿಗಳು ರೂ. 16.4 ಕೋಟಿ ಹಣವನ್ನು ಬಾಂಡ್ಗಳ ರೂಪದಲ್ಲಿ ನೀಡಿದ್ದರೆ ಬಿಜೆಪಿಗೆ ರೂ 4.9 ಕೋಟಿ (ಶೇ 30) ದೇಣಿಗೆ ದೊರಕಿದೆ, ಉಳಿದಂತೆ ಕಾಂಗ್ರೆಸ್ ಪಕ್ಷ ಶೇ 58ರಷ್ಟು, ಅಕಾಲಿ ದಳ ಮತ್ತು ಜೆಡಿ(ಯು) ಶೇ 6.1 ರಷ್ಟು ಪಡೆದಿವೆ. ಈ ಕಂಪನಿಗಳು ತೆರಿಗೆ ಪಾವತಿಸಿದ ಅಥವಾ ನಿವ್ವಳ ಲಾಭ ಪಡೆದ ಯಾವುದೇ ಮಾಹಿತಿಯಿಲ್ಲದೇ ಇರುವುದರಿಂದ ಅವುಗಳು ಅಕ್ರಮ ಹಣ ವರ್ಗಾವಣೆಯಲ್ಲಿ ಶಾಮೀಲಾಗಿರಬಹುದೇ ಎಂಬ ಶಂಕೆಯಿದೆ.