ಚುನಾವಣಾ ಬಾಂಡ್: ಮಾ.11ರಂದು ಎಸ್ ಬಿ ಐ ಅರ್ಜಿ ವಿಚಾರಣೆ ನಡೆಸಲಿರುವ ಸುಪ್ರೀಂ ಕೋರ್ಟ್
ಎಸ್ ಬಿ ಐ | Photo : PTI
ಹೊಸದಿಲ್ಲಿ: ರಾಜಕೀಯ ಪಕ್ಷಗಳು ನಗದೀಕರಿಸಿರುವ ಪ್ರತೀ ಚುನಾವಣಾ ಬಾಂಡ್ನ ವಿವರಗಳನ್ನು ಬಹಿರಂಗಗೊಳಿಸಲು ಗಡುವನ್ನು ಜೂ.30ರವರೆಗೆ ವಿಸ್ತರಿಸುವಂತೆ ಕೋರಿ ಭಾರತೀಯ ಸ್ಟೇಟ್ ಬ್ಯಾಂಕ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯದ ಐವರು ನ್ಯಾಯಾಧೀಶರ ಸಂವಿಧಾನ ಪೀಠವು ಮಾ.11ರಂದು ನಡೆಸಲಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠವು ಎಸ್ಬಿಐ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮವನ್ನು ಆರಂಭಿಸುವಂತೆ ಕೋರಿ ಅಸೋಷಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾಮ್ಸ್ (ಎಡಿಆರ್) ಸಲ್ಲಿಸಿರುವ ಪ್ರತ್ಯೇಕ ಅರ್ಜಿಯ ವಿಚಾರಣೆಯನ್ನೂ ನಡೆಸಲಿದೆ. ಚುನಾವಣಾ ಬಾಂಡ್ ಗಳ ಮೂಲಕ ರಾಜಕೀಯ ಪಕ್ಷಗಳಿಗೆ ನೀಡಲಾಗಿರುವ ದೇಣಿಗೆಗಳ ವಿವರಗಳನ್ನು ಮಾ.6ರೊಳಗೆ ಚುನಾವಣಾ ಆಯೋಗಕ್ಕೆ ಸಲ್ಲಿಸುವಂತೆ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನವನ್ನು ಎಸ್ಬಿಐ ಉದ್ದೇಶಪೂರ್ವಕವಾಗಿ ಉಲ್ಲಂಘಿಸಿದೆ ಎಂದು ಎಡಿಆರ್ ತನ್ನ ಅರ್ಜಿಯಲ್ಲಿ ಆರೋಪಿಸಿದೆ.
ಫೆ.5ರಂದು ಮಹತ್ವದ ತೀರ್ಪೊಂದರಲ್ಲಿ ಚುನಾವಣಾ ಬಾಂಡ್ ಯೋಜನೆಯನ್ನು ‘ಅಸಾಂವಿಧಾನಿಕ’ಎಂದು ಘೋಷಿಸಿದ್ದ ಐವರು ನ್ಯಾಯಾಧೀಶರ ಪೀಠವು ಅದನ್ನು ರದ್ದುಗೊಳಿಸಿತ್ತು. ದೇಣಿಗೆಗಳನ್ನು ನೀಡಿದವರು,ದೇಣಿಗೆಗಳ ಮೊತ್ತ ಮತ್ತು ಅವುಗಳನ್ನು ಸ್ವೀಕರಿಸಿದ್ದ ಪಕ್ಷಗಳ ವಿವರಗಳನ್ನು ಮಾ.13ರೊಳಗೆ ಬಹಿರಂಗಗೊಳಿಸುವಂತೆ ಚುನಾವಣಾ ಆಯೋಗಕ್ಕೆ ಆದೇಶಿಸಿದ್ದ ಪೀಠವು 2019.ಎ.12ರಿಂದ ಖರೀದಿಸಲಾದ ಚುನಾವಣಾ ಬಾಂಡ್ಗಳ ವಿವರಗಳನ್ನು ಮಾ.6ರೊಳಗೆ ಚುನಾವಣಾ ಆಯೋಗಕ್ಕೆ ಸಲ್ಲಿಸುವಂತೆ ಬಾಂಡ್ಗಳ ಮಾರಾಟಕ್ಕೆ ಏಕೈಕ ಅಧಿಕೃತ ಬ್ಯಾಂಕ್ ಆಗಿದ್ದ ಎಸ್ಬಿಐಗೆ ನಿರ್ದೇಶನವನ್ನು ನೀಡಿತ್ತು.