ಚುನಾವಣಾ ಬಾಂಡ್ ಬಿಜೆಪಿ ಪಾಲಿನ ಚಿನ್ನದ ಸುಗ್ಗಿ : ಚಿದಂಬರಂ
ಪಿ.ಚಿದಂಬರಂ| Photo: PTI
ಹೊಸದಿಲ್ಲಿ: ಚುನಾವಣಾ ಬಾಂಡ್ ಗಳನ್ನು ‘ಕಾನೂನುಬದ್ಧ ಲಂಚ ’ ಎಂದು ಶನಿವಾರ ಬಣ್ಣಿಸಿರುವ ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರು,ಅ.೪ರಂದು ಈ ಬಾಂಡ್ ಹೊಸ ಕಂತು ತೆರೆದುಕೊಳ್ಳುತ್ತಿದ್ದಂತೆ ಅದು ಬಿಜೆಪಿ ಪಾಲಿಗೆ ‘ಚಿನ್ನದ ಸುಗ್ಗಿ’ ಆಗಲಿದೆ ಎಂದು ಪ್ರತಿಪಾದಿಸಿದ್ದಾರೆ.
ಚುನಾವಣಾ ಬಾಂಡ್ ಗಳ 28ನೇ ಕಂತಿನ ವಿತರಣೆಗೆ ಕೇಂದ್ರ ಸರಕಾರವು ಸೆ.29ರಂದು ಅನುಮೋದನೆ ನೀಡಿದ್ದು,ಅ.4ರಂದು 10 ದಿನಗಳ ಅವಧಿಗೆ ಮಾರಾಟ ಆರಂಭವಾಗಲಿದೆ.
ರಾಜಸ್ಥಾನ,ಮಧ್ಯಪ್ರದೇಶ,ಛತ್ತೀಸ್ಗಡ,ಮಿರೆರಮ್ ಮತ್ತು ತೆಲಂಗಾಣ ವಿಧಾನಸಭಾ ಚುನಾವಣೆಗಳ ಮೊದಲು ಕೇಂದ್ರದ ಈ ನಿರ್ಧಾರ ಹೊರಬಿದ್ದಿದೆ. ಈ ರಾಜ್ಯಗಳಿಗೆ ಚುನಾವಣಾ ದಿನಾಂಕಗಳು ಶೀಘ್ರವೇ ಪ್ರಕಟಗೊಳ್ಳುವ ಸಾಧ್ಯತೆಯಿದೆ.
ತನ್ನ x ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ಚಿದಂಬರಂ, ‘ಚುನಾವಣಾ ಬಾಂಡ್ ಗಳ ಮಾರಾಟ ಅ.4ರಿಂದ ಆರಂಭಗೊಳ್ಳುತ್ತಿದ್ದು,ಅದು ಬಿಜೆಪಿ ಪಾಲಿಗೆ ಚಿನ್ನದ ಸುಗ್ಗಿಯಾಗಲಿದೆ. ಹಿಂದಿನ ದಾಖಲೆಗಳನ್ನು ಪರಿಗಣಿಸಿದರೆ ತಥಾಕಥಿತ ಅನಾಮಧೇಯ ದೇಣಿಗೆಗಳ ಶೇ.90ರಷ್ಟು ಪಾಲು ಬಿಜೆಪಿ ಜೇಬು ಸೇರಲಿದೆ. ಕ್ರೋನಿ ಬಂಡವಾಳಶಾಹಿಗಳು ದಿಲ್ಲಿಯಲ್ಲಿರುವ ತಮ್ಮ ಪ್ರಭು ಮತ್ತು ಧಣಿಗಳಿಗೆ ಕಾಣಿಕೆಗಳನ್ನು ಬರೆಯಲು ತಮ್ಮ ಚೆಕ್ ಬುಕ್ ಗಳನ್ನು ತೆರೆಯಲಿದ್ದಾರೆ ’ ಎಂದು ಹೇಳಿದ್ದಾರೆ.
ರಾಜಕೀಯ ಪಕ್ಷಗಳಿಗೆ ನೀಡಲಾಗುವ ದೇಣಿಗೆಗಳಿಗೆ ಪಾರದರ್ಶಕತೆಯನ್ನು ತರುವ ಪ್ರಯತ್ನವಾಗಿ ನಗದಿಗೆ ಬದಲಾಗಿ ಚುನಾವಣಾ ಬಾಂಡ್ ಗಳನ್ನು ಜಾರಿಗೆ ತರಲಾಗಿದೆ.
2018 ಮಾರ್ಚ್ ನಲ್ಲಿ ಮೊದಲ ಕಂತಿನ ಚುನಾವಣಾ ಬಾಂಡ್ ಗಳ ಮಾರಾಟ ನಡೆದಿತ್ತು. ಭಾರತೀಯ ಸ್ಟೇಟ್ ಬ್ಯಾಂಕ್ ಈ ಬಾಂಡ್ ಗಳನ್ನು ವಿತರಿಸಲು ಅಧಿಕಾರ ಪಡೆದಿರುವ ಏಕೈಕ ಬ್ಯಾಂಕ್ ಆಗಿದೆ. ಈ ಬಾಂಡ್ ಗಳನ್ನು ಭಾರತೀಯ ಪ್ರಜೆಗಳು,ಸಂಘ-ಸಂಸ್ಥೆಗಳು ಮಾತ್ರ ಖರೀದಿಸಬಹುದು.
ಕಳೆದ ಲೋಕಸಭಾ ಅಥವಾ ವಿಧಾನಸಭಾ ಚುನಾವಣೆಗಳಲ್ಲಿ ಕನಿಷ್ಠ ಶೇ.1 ರಷ್ಟು ಮತಗಳನ್ನು ಗಳಿಸಿರುವ ರಾಜಕೀಯ ಪಕ್ಷಗಳು ಚುನಾವಣಾ ಬಾಂಡ್ ಗಳ ಮೂಲಕ ದೇಣಿಗೆಗಳನ್ನು ಸ್ವೀಕರಿಸಲು ಅರ್ಹತೆಯನ್ನು ಹೊಂದಿರುತ್ತವೆ.
ಚುನಾವಣಾ ಬಾಂಡ್ ಗಳ ಯೋಜನೆಯು ದೇಶದಲ್ಲಿ ಚುನಾವಣಾ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವುದರಿಂದ ಅದು ನರೇಂದ್ರ ಮೋದಿ ಸರಕಾರದ ಅತ್ಯಂತ ‘ಕುಟಿಲ ಕೃತ್ಯಗಳಲ್ಲಿ ’ಒಂದಾಗಿದೆ ಎಂದು ಕಾಂಗ್ರೆಸ್ ಮಂಗಳವಾರ ಆರೋಪಿಸಿತ್ತು.