ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಆಯೋಗದಿಂದ ಮತದಾನ ವಂಚನೆ: ಟಿಎಮ್ಸಿ ಆರೋಪ

ಮಮತಾ ಬ್ಯಾನರ್ಜಿ | PC : PTI
ಹೊಸದಿಲ್ಲಿ: ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿರುವ ಪಶ್ಚಿಮ ಬಂಗಾಳದಲ್ಲಿ ಅಕ್ರಮ ಮತದಾನಕ್ಕೆ ಭಾರತೀಯ ಚುನಾವಣಾ ಆಯೋಗವು ಅವಕಾಶ ನೀಡುತ್ತಿದೆ ಎಂದು ತೃಣಮೂಲ ಕಾಂಗ್ರೆಸ್ (ಟಿಎಮ್ಸಿ) ಸೋಮವಾರ ಆರೋಪಿಸಿದೆ. ಈಗಾಗಲೇ ಅಸ್ತಿತ್ವದಲ್ಲಿರುವ ಮತದಾರರ ಫೋಟೊ ಗುರುತು ಚೀಟಿ (ಎಪಿಕ್) ಸಂಖ್ಯೆಗಳನ್ನೇ ಬಳಸಿಕೊಂಡು ಮತ ಚಲಾಯಿಸಲು ಹೊರ ರಾಜ್ಯಗಳಿಂದ ಜನರನ್ನು ಕರೆತರಲಾಗುತ್ತಿದೆ ಎಂದು ಅದು ಹೇಳಿದೆ.
ಹೊಸದಿಲ್ಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟಿಎಮ್ಸಿ ರಾಜ್ಯಸಭಾ ನಾಯಕ ಡೆರೆಕ್ ಒ’ಬ್ರಿಯನ್, ಇದೊಂದು ‘‘ಮಹಾ (ಎಪಿಕ್) ಹಗರಣ’’ ಎಂಬುದಾಗಿ ಬಣ್ಣಿಸಿದರು. ಈ ಹಗರಣವನ್ನು ಪಕ್ಷದ ಅಧ್ಯಕ್ಷೆ ಹಾಗೂ ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಫೆಬ್ರವರಿ 27ರಂದು ಮೊದಲು ಬಯಲಿಗೆಳೆದಿದ್ದಾರೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ರಾಜ್ಯಸಭಾ ಸದಸ್ಯರಾದ ಸಾಗರಿಕಾ ಘೋಷ್ ಮತ್ತು ಕೀರ್ತಿ ಆಝಾದ್ ಉಪಸ್ಥಿತರಿದ್ದರು.
ಈ ಹಗರಣಕ್ಕೆ ಪ್ರತಿಕ್ರಿಯಿಸಿರುವ ಚುನಾವಣಾ ಆಯೋಗವು, ತಪ್ಪನ್ನು ‘‘ಒಪ್ಪಿಕೊಂಡಿದೆ’’ಯಾದರೂ, ‘‘ಸ್ವೀಕರಿಸಿಲ್ಲ’’ ಎಂದು ಒ’ಬ್ರಿಯನ್ ತಿಳಿಸಿದರು.
‘‘ನೈಜ ಮತದಾರರಿಗೆ ಮತದಾನಕ್ಕೆ ಅವಕಾಶ ನೀಡಲಾಗುವುದಿಲ್ಲ ಹಾಗೂ ಅವರ ಮತಗಳನ್ನು ಅವರ ಮತದಾರ ಗುರುತು ಚೀಟಿ ಸಂಖ್ಯೆಯನ್ನೇ ಹೊಂದಿರುವ ನಕಲಿ ಮತದಾರರು ಚಲಾಯಿಸುತ್ತಾರೆ. ಈ ನಕಲಿ ಮತದಾರರನ್ನು ಇತರ ರಾಜ್ಯಗಳಿಂದ ಕರೆದುಕೊಂಡು ಬರಲಾಗುವುದು. ಇದು ಅಸ್ವೀಕಾರಾರ್ಹ’’ ಎಂದು ಒ’ಬ್ರಿಯನ್ ನುಡಿದರು.
ಟಿಎಮ್ಸಿಯು ತನ್ನ ಪತ್ರಿಕಾಗೋಷ್ಠಿಯ ಬಗ್ಗೆ ರವಿವಾರ ಪ್ರಕಟನೆ ನೀಡಿದ ಎರಡೇ ಗಂಟೆಗಳಲ್ಲಿ ಚುನಾವಣಾ ಆಯೋಗವು ನೀಡಿರುವ ಹೇಳಿಕೆಯೊಂದರ ಹೊತ್ತುಗಾರಿಕೆಯನ್ನೂ ಅವರು ಪ್ರಶ್ನಿಸಿದರು. ‘‘ಯಾರನ್ನಾದರೂ ಅಪರಾಧ ನಡೆಸುತ್ತಿರುವಾಗಲೇ ಬಂಧಿಸಲಾಗಿದೆಯೇ?’’ ಎಂದು ಅವರು ಕೇಳಿದರು
ಚುನಾವಣಾ ಆಯೋಗವು ರವಿವಾರ ನೀಡಿದ ತನ್ನ ಹೇಳಿಕೆಯಲ್ಲಿ, ಕೆಲವು ಮತದಾರರ ಗುರುತು ಚೀಟಿ ಸಂಖ್ಯೆಯು ಒಂದೇ ಆಗಿದ್ದರೂ, ಅವರ ವೈಯಕ್ತಿಕ ಮಾಹಿತಿಗಳು, ವಿಧಾನಸಭಾ ಕ್ಷೇತ್ರ ಮತ್ತು ಮತಗಟ್ಟೆ ಮುಂತಾದ ಇತರ ವಿವರಗಳು ಭಿನ್ನವಾಗಿವೆ ಎಂದು ಹೇಳಿದೆ.
‘‘ಮತದಾರ ಗುರುತು ಚೀಟಿಯ ಸಂಖ್ಯೆ ಏನಿದ್ದರೂ, ಓರ್ವ ಮತದಾರನು ತಾನು ನೋಂದಾಯಿಸಿದ ಕ್ಷೇತ್ರದ ನಿಯೋಜಿತ ಮತಗಟ್ಟೆಗಳಲ್ಲಿ ಮಾತ್ರ ಮತ ಚಲಾಯಿಸಬಹುದಾಗಿದೆ’’ ಎಂದು ಚುನಾವಣಾ ಅಯೋಗ ಹೇಳಿದೆ.
‘‘ಹಿಂದಿನ ಚುನಾವಣೆ ನಡೆದ ಬಳಿಕ ಮತದಾರರ ಪಟ್ಟಿಗೆ ಬೇರೆ ಹೆಸರುಗಳನ್ನು ಸೇರಿಸಲಾಗಿದೆ ಎಂಬ ನಮ್ಮ ಹೇಳಿಕೆಯನ್ನು ಚುನಾವಣಾ ಆಯೋಗದ ಹೇಳಿಕೆಯು ಸಮರ್ಥಿಸಿದೆ’’ ಎಂದು ಟಿಎಮ್ಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕುನಾಲ್ ಘೋಷ್ ರವಿವಾರ ಹೇಳಿದ್ದಾರೆ. ‘‘ಹೆಚ್ಚು ಮತಗಳನ್ನು ಪಡೆಯಲು ಬಿಜೆಪಿಗೆ ನೆರವಾಗುವುದಕ್ಕಾಗಿ ಹೀಗೆ ಮಾಡಲಾಗಿದೆ’’ ಎಂದು ಅವರು ಆರೋಪಿಸಿದ್ದಾರೆ.