ಹಿಂಸಾಚಾರ ಪೀಡಿತ ಮಣಿಪುರದ ಶಿಬಿರದಿಂದಲೇ ಮತದಾನಕ್ಕೆ ಜನರಿಗೆ ಅವಕಾಶ : ಚುನಾವಣಾ ಆಯೋಗ
ಹೊಸದಿಲ್ಲಿ : ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹಿಂಸಾಚಾರ ಪೀಡಿತ ಮಣಿಪುರದ ಶಿಬಿರಗಳಲ್ಲಿರುವ ಜನರು ಅಲ್ಲಿಂದಲೇ ಮತದಾನ ಮಾಡಲು ಅವಕಾಶ ನೀಡಲಾಗುವುದು ಎಂದು ಚುನಾವಣಾ ಆಯೋಗ ಶನಿವಾರ ಹೇಳಿದೆ.
ಲೋಕಸಭೆ ಚುನಾವಣಾ ವೇಳಾಪಟ್ಟಿ ಪ್ರಕಟಿಸಿದ ಪತ್ರಿಕಾಗೋಷ್ಠಿಯಲ್ಲಿ ಮಣಿಪುರದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್, ನಾವು ಎಲ್ಲಾ ವ್ಯವಸ್ಥೆ ಮಾಡಲಿದ್ದೇವೆ ಎಂದಿದ್ದಾರೆ.
‘‘ನಾವು ಅಧಿಸೂಚನೆ ಹೊರಡಿಸಿದ ಯೋಜನೆಯನ್ನು ರೂಪಿಸಿದ್ದೇವೆ. ಈ ಯೋಜನೆಯಂತೆ ಶಿಬಿರದಿಂದಲೇ ಮತದಾನ ಮಾಡಲು ಅವಕಾಶ ನೀಡಲಾಗುವುದು. ಜಮ್ಮು ಹಾಗೂ ಕಾಶ್ಮೀರದ ವಲಸಿಗರಿಗೆ ಇರುವ ಯೋಜನೆಯಂತೆ ಮಣಿಪುರದಲ್ಲಿ ಕೂಡ ಅನುಷ್ಠಾನಗೊಳಿಸಲಾಗುವುದು. ಮತದಾರರು ತಮ್ಮ ಶಿಬಿರಗಳಿಂದಲೇ ಮತದಾನ ಮಾಡಲು ಅವಕಾಶ ನೀಡಲಾಗುವುದು’’ ಎಂದು ಅವರು ಹೇಳಿದರು.
ಮತದಾರರಲ್ಲಿ ನನ್ನ ಮನವಿಯೆಂದರೆ, ಚುನಾವಣೆಯಲ್ಲಿ ಶಾಂತಿಯುತವಾಗಿ ಪಾಲ್ಗೊಳ್ಳುವ ಹಾಗೂ ಮತಪತ್ರದ ಮೂಲಕ ನಿರ್ಧರಿಸೋಣ.
ಮಣಿಪುರದಲ್ಲಿ ಕಳೆದ ವರ್ಷ ಮಾರ್ಚ್ ನಿಂದ ಮೈತೈ ಹಾಗೂ ಕುಕಿ ಬುಡಕಟ್ಟು ಸಮುದಾಯಗಳ ನಡುವೆ ಜನಾಂಗೀಯ ಘರ್ಷಣೆ ಭುಗಿಲೆದ್ದಿತ್ತು. ಇದರ ಪರಿಣಾಮ 200ಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅಧಿಕಾರಿಗಳ ಪ್ರಕಾರ 25 ಸಾವಿರಕ್ಕೂ ಅಧಿಕ ಜನರನ್ನು ಭದ್ರತಾ ಪಡೆಗಳು ರಕ್ಷಿಸಿವೆ. ಪ್ರಕ್ಷುಬ್ದತೆ ಇನ್ನು ಕೂಡ ಶಮನವಾಗದ ಹಿನ್ನೆಲೆಯಲ್ಲಿ ಸುಮಾರು 50 ಸಾವಿರ ಜನರು ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ.